

ವಿಜಯವಾಣಿ ಸುದ್ದಿಜಾಲ ಆನೇಕಲ್
ಪ್ರಾಚೀನ ಕಾಲದಿಂದಲೂ ಮನುಷ್ಯನ ಅವಶ್ಯಕತೆಗಳನ್ನು ಈಡೇರಿಸುತ್ತಿರುವ ಪ್ರಕೃತಿಯನ್ನು ಮನುಷ್ಯ ದುರಾಸೆಯಿಂದ ನಾಶಪಡಿಸುತ್ತಿದ್ದಾನೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಎಸ್.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಮತ್ತು ಇಕೋ ಕ್ಲಬ್ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಗಿಡ ನೆಡುವ ಮತ್ತು ಪರಿಸರ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ನಗರೀಕರಣ, ಜಾಗತೀಕರಣದ ಪರಿಣಾಮ ತಾಪಮಾನ ಹೆಚ್ಚಳವಾಗಿದೆ. ಇದರಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿದೆ. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರು ಕೆಲಸ ಮಾಡಬೇಕು. ಪರಿಸರ ನಾಶದಂತ ಕಾರ್ಯಕ್ಕೆ ಕಡಿವಾಣ ಹಾಕಬೇಕು ಎಂದರು.
ಯುವಕರು ಸಮಾಜದ ಆಸ್ತಿ. ಹಾಗಾಗಿ ಮುಂದಿನ ಪೀಳಿಗೆಗೆ ಸಮಾಜಕ್ಕಾಗಿ ಪರಿಸರ ಸಂರಕ್ಷಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮದ್ಯಪಾನ, ಡ್ರಗ್ಸ್ ಸೇರಿ ಮಾದಕ ವ್ಯಸನಗಳಿಗೆ ತುತ್ತಾಗಿ ಜವಾಬ್ದಾರಿ ಮರೆಯುತ್ತಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳೆವಣಿಗೆಯಲ್ಲ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಮಾಜದ ಸತ್ಪ್ರಜೆಗಳಾಗಬೇಕು ಎಂದರು.
ವಕೀಲ ಪುರುಷೋತ್ತಮ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಠಿಣವಾದ ಕಾನೂನುಗಳಿವೆ. ಆದರೆ, ಈ ಕಾನೂನುಗಳ ಪಾಲನೆ ಸಮರ್ಪಕವಾಗಿ ಆಗದಿರುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ಕೆರೆಗಳಿಗೆ ಕಲುಷಿತ ನೀರು ಹರಿಸುವುದು ಕಾನೂನು ಬಾಹಿರ. ಆದರೆ, ಹಲವಾರು ಕೆರೆಗಳಿಗೆ ತ್ಯಾಜ್ಯ ನೀರು ಬಿಡಲಾಗುತ್ತಿದೆ. ಕೆರೆಗಳಿಗೆ ತ್ಯಾಜ್ಯ ನೀರು ಹರಿಸದೇ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ನೀರು ಶುದ್ಧೀಕರಿಸಬೇಕು. ಯುವಕರು ಪರಿಸರ ಕಾಳಜಿಯನ್ನು ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದರು.
ಎನ್‌ಎಸ್‌ಎಸ್ ಸಂಚಾಲಕ ವಿ.ರಾಮಕೃಷ್ಣಪ್ಪ, ಸುನೀತಾ ಕುಮಾರಿ ಹಾಗೂ ಗಮನ ಮಹಿಳಾ ಸಮುದಾಯದ ಸದಸ್ಯರು, ಆನೇಕಲ್ ಪುರಸಭೆ ಮತ್ತು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.