

ಮೈಸೂರು: ಪ್ರಕೃತಿ ಆರೋಗ್ಯ ಚೆನ್ನಾಗಿದ್ದರೆ ನಾವೆಲ್ಲ ನೆಮ್ಮದಿ ಹಾಗೂ ಶಾಂತಿಯಿಂದ ಆರೋಗ್ಯವಂತರಾಗಿ ಬಾಳಬಹುದು. ನಾವು ಮುಂದಿನ ತಲೆಮಾರಿಗೆ ಆಸ್ತಿ, ಹಣ, ಬಿಟ್ಟು ಹೋಗುವ ಬದಲು ಉತ್ತಮ ಪರಿಸರ ಪ್ರಕೃತಿಯನ್ನು ಬಿಟ್ಟು ಹೋದರೆ ನಮ್ಮ ಜೀವನ ಸಾರ್ಥಕ ಎಂದು ಪ್ರಗತಿಪರ ಕೃಷಿಕ ತಮ್ಮಯ್ಯ ಹೇಳಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ತಾಲೂಕಿನ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರಕಾಡು, ಗೋಮಾಳ, ಮೀಸಲು ಅರಣ್ಯಗಳು ಕಣ್ಮರೆಯಾಗುತ್ತಿವೆ. ಹೀಗಾದರೆ ಪರಿಸರ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮನುಷ್ಯನ ಎಲ್ಲ ಆಸೆಗಳನ್ನು ಪೂರೈಸುವ ಶಕ್ತಿ ಪ್ರಕೃತಿಗೆ ಇದೆ. ಆದರೆ, ದುರಾಸೆಗಳನ್ನು ಪೂರೈಸುವ ಶಕ್ತಿ ಇಲ್ಲ. ನಮಗೆ ಜನ್ಮ ಕೊಟ್ಟ ತಂದೆ, ತಾಯಿಯನ್ನು ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಅದೇ ರೀತಿ ಪರಿಸರವನ್ನು ನಾಶ ಮಾಡಿದರೆ ನಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಹುಟ್ಟುಹಬ್ಬ ಆಚರಣೆಯ ಸಂದರ್ಭ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ, ಪರಿಸರವೂ ಅಷ್ಟೇ ಮುಖ್ಯ. ಜನಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಅರಣ್ಯ ಪ್ರದೇಶದ ನಾಶವೂ ಹೆಚ್ಚಾಗುತ್ತಿದೆ. ಇದರಿಂದ ಹವಾಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಕಾಳಜಿ ಮೂಡಿಸುವ ಕಾರ್ಯ ಮಾಡಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಬೇಕು. ಪರಿಸರ ಸಂಪತ್ತು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ, ಮಳೆ ಮಾರುತ ಬದಲಾಗುತ್ತಿದೆ, ಅಂತರ್ಜಲ ಕುಸಿಯುತ್ತಿದೆ. ಇದು ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಜಾಗೃತರಾಗಿ ಪರಿಸರ ಸಂರಕ್ಷಿಸಲು ಮುಂದಾಗಬೇಕು ಕರೆ ನೀಡಿದರು.
ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಮಾತನಾಡಿ, ದೇಶದಲ್ಲಿ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಪ್ರಸ್ತುತ ಶೇ.21 ರಷ್ಟು ಮಾತ್ರ ಇದೆ. ಪ್ರತಿಯೊಬ್ಬರು ಅರಣ್ಯ ಪ್ರದೇಶ ಹಾಗೂ ನಮ್ಮ ಪರಿಸರವನ್ನು ಉಳಿಸಲು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮುರಾರ್ಜಿ ದೇಸಾಯಿ ಶಾಲೆಯ ಮುಖ್ಯೋಪಾಧ್ಯಾಯ ನಿಂಗಪ್ಪ, ರೈತ ಮುಖಂಡರಾದ ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ್ ಹಾಗೂ ಇತರರು ಇದ್ದರು.