

ಬಸವನಬಾಗೇವಾಡಿ: ಸಕಲ ಜೀವರಾಶಿಗಳ ಆರೋಗ್ಯ ವೃದ್ಧಿಯಾಗಬೇಕಾದರೆ ಪರಿಸರ ಶುದ್ಧವಾಗಿರಬೇಕು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಉಕ್ಕಲಿ ರಸ್ತೆ ಪಕ್ಕದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಂದಾಜು 9.05 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಯೋಜನೆಯಡಿ ಅಂದಾಜು 4.44 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಆಲಮಟ್ಟಿ ಅಣೆಕಟ್ಟೆಯಿಂದ ಕೆರೆಗೆ ನೀರು ತುಂಬಿಸುವುದರಿಂದ ಸುತ್ತಮುತ್ತಲಿನ ಕೊಳವೆ ಬಾವಿ, ತೆರೆದ ಬಾವಿ, ಅಂತರ್ಜಲ ವೃದ್ಧಿ ಆಗುತ್ತದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿ ಪಟ್ಟಣದ ಜನತೆ ಹಾಗೂ ಪ.ಪಂ. ಸದಸ್ಯರ ಬಹುದಿನಗಳ ಕನಸಿನ ಯೋಜನೆ ಕೂಡ ಇದಾಗಿತ್ತು. ಈ ಕೆರೆಯನ್ನು ಒಂದು ಉತ್ತಮ ವಾಯುವಿಹಾರದ ಸ್ಥಳವಾಗಿ, ಪಿಕ್‌ನಿಕ್ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಡಾ. ಎಂ.ಬಿ. ಮೇತ್ರಿ, ಡಾ. ರಾಮಚಂದ್ರ ಪತ್ತಾರ, ಭಾಗ್ಯರಾಜ್ ಸೊನ್ನದ, ರಮೇಶ ಪಿರಗಾ, ಅಜೀತ ಜಾನಕರ, ಪ್ರಕಾಶ್ ಮನಗೂಳಿ, ಮಕಾನದಾರ, ಎಪಿಎಂ.ಸಿ. ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಬಸವರಾಜ ಸೋಮಪುರ, ಈಶ್ವರಗೌಡ ಪಾಟೀಲ, ಶಿವನಗೌಡ ಗುಜಗೊಂಡ, ಶ್ರೀಕಾಂತ ಸಾರವಾಡ, ಪರಶುರಾಮ ಬಿದರಿ, ರೇವಣಸಿದ್ದ, ಎಂ.ಎಸ್. ಗುಜಗೊಂಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ್ ರೇವೂರಕರ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ ವಸದ, ಕಿರಿಯ ಇಂಜಿನಿಯರ್ ವಿಜಕುಮಾರ ಸುನದಾಳ, ಶಾಂತವೀರ ಕೋಳಿ, ವಿಜಯಕುಮಾರ ರಜಪೂತ, ರಮೇಶ ತೊರವಿ, ಶಿವಾನಂದ ಹುಕುಮನಾಳ ಇತರರಿದ್ದರು.