

ತುಮಕೂರು: ಜಿಲ್ಲೆಯಲ್ಲಿ 49ಕ್ಕೂ ಹೆಚ್ಚು ಕ್ರಷರ್‌ಗಳು ಅಧಿಕೃತ ಪರವಾನಗಿ ಪಡೆದು ನಡೆಯುತ್ತಿವೆಯಾದರೂ ಬೆಟ್ಟ-ಗುಡ್ಡಗಳು ಪ್ರಭಾವಿಗಳ ಹಣದಾಸೆಗೆ ಕರುಗುತ್ತಿರುವ ಪರಿ ಭಯಾನಕವೆನಿಸಿದೆ. ಕ್ರಷರ್‌ಗಳು ಪರಿಸರಕ್ಕೆ ತೀವ್ರ ಧಕ್ಕೆ ಉಂಟು ಮಾಡುತ್ತಿದ್ದರೂ ಜಿಲ್ಲಾಡಳಿತ ಜಾಣಕುರುಡಾಗಿದೆ.
ಧೂಳಿನಿಂದ ಉಂಟಾಗುವ ಪರಿಸರ ಹಾನಿ, ವನ್ಯಜೀವಿ, ಜನಜಾನುವಾರು ಜೀವಹಾನಿ ಎಲ್ಲವೂ ಹಣದಾಹಿಗಳ ಆರ್ಭಟದ ಮುಂದೆ ಗೌಣವಾಗಿದೆ. ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲೇ ಅತಿ ಹೆಚ್ಚು ಕ್ರಷರ್‌ಗಳಿದ್ದು ಕಲ್ಲುಬಂಡೆ ಸ್ಫೋಟದ ಸದ್ದು ಜಿಲ್ಲಾಧಿಕಾರಿ ಸೇರಿ ಯಾವೊಬ್ಬ ಅಧಿಕಾರಿಗಳ ಕಿವಿಗೂ ಬೀಳುವುದಿಲ್ಲ. ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕ್ರಷರ್‌ಗಳಿದ್ದು ಸದ್ಯ 49 ಕ್ರಷರ್‌ಗಳು ಚಾಲ್ತಿಯಲ್ಲಿವೆ. ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ನಗರದ ಹೊರವಲಯದ ಅಮಲಾಪುರ, ಅಜ್ಜಪ್ಪನಹಳ್ಳಿ, ಪಂಡಿತನಹಳ್ಳಿ ನೆಡುತೋಪು, ಮೈದಾಳದಲ್ಲಿನ ಕ್ರಷರ್‌ಗಳು ಪರವಾನಗಿ ಪಡೆದಿದ್ದರೂ ನಿಯಮಗಳನ್ನು ಗಾಳಿಗೆ ತೂರಿವೆ.
ತುಮಕೂರು ಗ್ರಾಮಾಂತರದಲ್ಲಿ 30 ಕ್ರಷರ್‌ಗಳಿದ್ದು 19 ಚಾಲ್ತಿಯಲ್ಲಿವೆ. ಕೊರಟಗೆರೆಯಲ್ಲಿ 10 ಕ್ರಷರ್‌ಗಳಲ್ಲಿ ಸದ್ಯ 6 ಚಾಲ್ತಿಯಲ್ಲಿವೆ. ಕುಣಿಗಲ್ 11, ತಿಪಟೂರು 3, ಶಿರಾ 2, ಪಾವಗಡ 1 ಕ್ರಷರ್‌ಗಳು ಚಾಲ್ತಿಯಲ್ಲಿವೆ. ಕ್ರಷರ್‌ಗಳಿರುವ 5-6 ಕಿ.ಮೀ., ವ್ಯಾಪ್ತಿಯಲ್ಲಿ ಜನಜಾನುವಾರು ವಾಸಿಸಲು ಯೋಗ್ಯವಿಲ್ಲವಾಗಿದೆ. ತೋಟ-ತುಡಿಕೆಗಳು ಧೂಳಿನಿಂದ ನಾಶವಾಗುತ್ತಿವೆ. ಮಣ್ಣಿನ ಫಲವತತ್ತೆಯೂ ಹಾಳಾಗಿದೆ. ಬೆಳೆಗಳ ಧ್ಯುತಿ ಸಂಶ್ಲೇಷಣಾ ಕ್ರಿಯೆಗೆ (ಫೋಟೋ ಸಿಂಥೆಸಿಸ್)ಗೆ ಧೂಳು ಮಾರಕವಾಗಿ ಇಳುವರಿ ಕುಸಿತಗೊಳ್ಳಲಿದೆ.
ಬಂಡೆ ಸ್ಫೋಟ-ಬಿರುಕುಬಿಟ್ಟ ಮನೆ: ತುಮಕೂರು ತಾಲೂಕಿನ ಬ್ಯಾತ, ಹೊದೆಕಲ್ ಗ್ರಾಮಗಳು ಜಿಲ್ಲೆಯ ಗಡಿಭಾಗವಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಬರುವ ದಾಬಸ್‌ಪೇಟೆಯಲ್ಲಿ ನಡೆಯುವ ಗಣಿಗಾರಿಕೆಗೆ ಜನತೆ ನಿತ್ಯ ನಲುಗುತ್ತಿದ್ದಾರೆ. ಬೆಟ್ಟಗುಡ್ಡುಗಳಲ್ಲಿ ವಾಸಿಸುವ ವನ್ಯಜೀವಿಗಳು ಹಳ್ಳಿಗಳತ್ತ ನುಗ್ಗುತ್ತಿವೆ.
ಪಕ್ಕದ ಜಿಲ್ಲೆಯಲ್ಲಿ ಸ್ಫೋಟಗೊಂಡರೆ ಅದರ ತೀವ್ರತೆ 1-2 ಕಿ.ಮೀ., ವ್ಯಾಪ್ತಿವರೆಗೆ ಇರಲಿದ್ದು, ಬ್ಯಾತ, ಹೊದೆಕಲ್ ಗ್ರಾಮಗಳ ಬಹುತೇಕ ಮನೆ ಗೋಡೆಗಳು ಬಿರುಕುಬಿಟ್ಟಿವೆ. ಈ ಬಗ್ಗೆ ಗ್ರಾಮಸ್ಥರು ಕ್ರಷರ್ ಮಾಲೀಕರಿಗೆ ದೂರು ಸಲ್ಲಿಸಲು ತೆರಳಿದರೆ ಹಲ್ಲೆ ಕೂಡ ಮಾಡಲಾಗಿದೆ. ಇದೇ ವ್ಯಥೆಯನ್ನು ಸೀತಕಲ್ ಗ್ರಾಪಂ ವ್ಯಾಪ್ತಿಯ ದ್ಯಾಪೇನಹಳ್ಳಿಯಲ್ಲಿನ ಕ್ರಷರ್ ಪರಿಣಾಮವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಕ್ರಷರ್‌ಗಳಿಗೆ ಅಂಕುಶ ಹಾಕದಿದ್ದರೆ ಪರಿಸರ ನಾಶ ಖಂಡಿತ.
ಶ್ವಾಸಕೋಶ ಸೋಂಕು, ಚರ್ಮ ಕ್ಯಾನ್ಸರ್...: ಕಲ್ಲುಗಣಿಗಾರಿಕೆ ಜನಜಾನುವಾರುಗಳ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಅಧಿಕಾರಸ್ಥರು ತಲೆಕೆಡಿಸಿಕೊಳ್ಳುತ್ತಿಲ್ಲ. ಗಣಿಗಾರಿಕೆಯಲ್ಲಿ ದುಡಿಯುವವರಿಗೆ ರಕ್ಷಾಕವಚವಿಲ್ಲ. ಕಲ್ಲು ಧೂಳಿನಿಂದ ರಕ್ತಸ್ರಾವ, ಕಿವುಡುತನ, ಶ್ವಾಸಕೋಶ ಸೋಂಕು, ಕುರುಡುತನಕ್ಕೆ ತುತ್ತಾಗುತ್ತಿರುವ ಉದಾಹರಣೆಗಳು ಕಣ್ಮುಂದಿವೆ. ಇನ್ನು ಬಿಸಿಲಿಗೆ ಮೈಯೊಡ್ಡುವುದರಿಂದ ಚರ್ಮ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎನ್ನುತ್ತಾರೆ ಪರಿಸರ ವಿಜ್ಞಾನ ಡಾ.ಡಿ.ಜೆ.ಮೋಹನ್.
ಊರ್ಡಿಗೆರೆ ಕೇಂದ್ರಸ್ಥಳ: ದೇವರಾಯನದುರ್ಗ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಊರ್ಡಿಗೆರೆ ಕಲ್ಲು ಗಣಿಗಾರಿಕೆ ಹೆಡ್‌ಕ್ವಾರ್ಟ್ರಸ್‌ನಂತಿದೆ. ಕುರುವೆಲ್ (3ಕಿ.ಮೀ.,), ದುರ್ಗದನಾಗೇನಹಳ್ಳಿ (4ಕಿ.ಮೀ.,), ಸೀತಕಲ್ಲು (5 ಕಿ.ಮೀ.,), ದುರ್ಗದಹಳ್ಳಿ (6ಕಿ.ಮೀ.,), ತೀತ (8 ಕಿ.ಮೀ.,), ಬೆಳಗುಂಬ (12 ಕಿ.ಮೀ.,), ಅರೆಗುಜ್ಜನಹಳ್ಳಿ (6 ಕಿ.ಮೀ.,), ಮೈದಾಳ (8 ಕಿ.ಮೀ.,), ಮಾರನಾಯಕನಪಾಳ್ಯ (12 ಕಿ.ಮೀ.,) ವ್ಯಾಪ್ತಿಯಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು ಪರಿಸರ ಆಘಾತ ಅಧ್ಯಯನ ವರದಿ ತಯಾರಿಸದೆ ಪರವಾನಗಿ ನೀಡಿರುವುದು ಭವಿಷ್ಯದಲ್ಲಿ ಪರಿಸರಕ್ಕೆ ವ್ಯಾಪಕ ಹಾನಿ ಉಂಟಾಗಲಿದೆ.
36 ಕೋಟಿ ರೂ., ರಾಜಧನ: ಕರೊನಾ ನಡುವೆಯೂ ಕಲ್ಲು ಗಣಿಗಾರಿಕೆಯಿಂದ 36 ಕೋಟಿ ರೂ., ಈ ವರ್ಷ ರಾಜಧನ ಬರುತ್ತಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಿಂದಲೇ ಕ್ರಷರ್‌ಗಳಿಗೆ ಸಿ-ಫಾರಂ (ಪರವಾನಗಿ) ನೀಡಲಾಗಿದೆ. ಅರಣ್ಯ ಇಲಾಖೆ, ಕಂದಾಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಳಗೊಂಡ ಸಮಿತಿ ಒಪ್ಪಿಗೆಯ ಬಳಿಕವೇ ಕ್ರಷರ್‌ಗಳಿಗೆ ಪರವಾನಗಿ ನೀಡಲಾಗುತ್ತಿದೆ. 2016 ನಂತರ ಜಿಲ್ಲೆಯಲ್ಲಿ ಯಾವುದೇ ಹೊಸ ಕ್ರಷರ್‌ಗಳಿಗೆ ಪರವಾನಗಿ ನೀಡಿಲ್ಲ.
ಸುರಕ್ಷತಾ ವಲಯ ಗುರುತಿಸಿ ಕ್ರಷರ್‌ಗಳಿಗೆ ಪರವಾನಗಿ ನೀಡಲಾಗುತ್ತಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಕ್ರಷರ್‌ಗಳು ಈ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಪರವಾನಗಿ ನೀಡಿವೆ. ಜಿಲ್ಲೆಯಲ್ಲಿ ಯಾವುದೇ ಅಕ್ರಮ ಕ್ರಷರ್‌ಗಳು ನಡೆಯುತ್ತಿಲ್ಲ. ಈ ವರ್ಷ 36 ಕೋ.ರೂ., ರಾಜಧನ ಸಂಗ್ರಹವಾಗಿದೆ. ಶೇ.75-80 ರಾಯಲ್ಟಿ ಸಂಗ್ರಹಿಸುವ ಗುರಿಹೊಂದಲಾಗಿದೆ.
ಮಹೇಶ್ ಉಪನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ ತುಮಕೂರು
ಕ್ರಷರ್ ಮಾಡಲು 10 ಕೋಟಿ ರೂಪಾಯಿ ಹೆಚ್ಚು ಬಂಡವಾಳ ಬೇಕು. ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸಲೇಬೇಕು. ಅಷ್ಟು ದೊಡ್ಡ ಮೊತ್ತದ ಬಂಡವಾಳಕ್ಕೆ ಬ್ಯಾಂಕ್‌ಗಳಲ್ಲಿ ಸಾಲ ಮಾಡುವುದು ಅನಿವಾರ್ಯ. ಪರವಾನಗಿ ಸೇರಿ ಕಂದಾಯ, ಗಣಿ ಮತ್ತು ಭೂವಿಜ್ಞಾನ, ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರ ಮಂಡಳಿ ಅನುಮತಿ ಇದ್ದರಷ್ಟೇ ಬ್ಯಾಂಕ್‌ಗಳಲ್ಲಿ ಸಾಲ ಸಿಗಲಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಪ್ರತೀ ಟನ್‌ಗೆ ರಾಯಲ್ಟಿ ಕಟ್ಟುತ್ತೇವೆ.
ಎಚ್.ಎಸ್.ರವಿಶಂಕರ್, ನಿರ್ದೇಶಕ, ಜಿಲ್ಲಾ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘ