ಅರಿಶಿನಗುಂಡಿ ಫಾಲ್ಸ್ ದುರಂತದ ಎಫೆಕ್ಟ್; ಕೊಡಚಾದ್ರಿಗೆ ಪ್ರವೇಶ ನಿರ್ಬಂಧ

30hos1p kodachadri
ಕೊಡಚಾದ್ರಿ ಬೆಟ್ಟದ ವಿಹಂಗಮ ನೋಟ.
Published on

ರವಿ ಬಿದನೂರು ಹೊಸನಗರ
ಅರಿಶಿನಗುಂಡಿ ಜಲಪಾತದಲ್ಲಿ ಇತ್ತೀಚೆಗೆ ನಡೆದ ದುರಂತದ ಪರಿಣಾಮ ಕೊಡಚಾದ್ರಿ ಸೇರಿ ರಾಜ್ಯದ ವನ್ಯಜೀವಿ ವ್ಯಾಪ್ತಿಯ ಎಲ್ಲ ಪ್ರವಾಸಿ, ಧಾರ್ಮಿಕ ತಾಣಗಳ ಮೇಲೂ ಆಗಿದೆ. ಇದು ಕೊಡಚಾದ್ರಿ ಗಿರಿಯನ್ನೇ ನಂಬಿ ಬದುಕು ಕಟ್ಟಿಕೊಂಡ ಕುಟುಂಬಗಳ ಆತಂಕಕ್ಕೂ ಕಾರಣವಾಗಿದೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕುದುರೆಮುಖ ವನ್ಯಜೀವಿ ವಿಭಾಗದಿಂದ ಆದೇಶ ಹೊರಬಿದ್ದಿದ್ದು ಜು.30ರಿಂದ ಕೊಡಚಾದ್ರಿ ಗಿರಿ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಉತ್ತಮ ಮಳೆಯಾಗುತ್ತಿದ್ದು ಮೈದುಂಬಿರುವ ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವೇಳೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ ಪ್ರಮುಖ ತಾಣಗಳಿಗೆ ತಾತ್ಕಾಲಿಕ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ತಪ್ಪಲಿನ ಹಿಡ್ಲುಮನೆ, ಅರಶಿನಗುಂಡಿ, ಕೂಡ್ಲು ಬರ್ಕಳ, ವನಕಬ್ಬಿ, ಬಂಡಾಜೆ ಸೇರಿ ಇತರ ಜಲಪಾತಗಳ ಪ್ರವೇಶಕ್ಕೆ ಬ್ರೇಕ್ ಬಿದ್ದಿದೆ. ಕೊಡಚಾದ್ರಿ ಗಿರಿ ಸೇರಿ ಕುದುರೆಮುಖ ಪೀಕ್, ನೇತ್ರಾವತಿ ಪೀಕ್, ನರಸಿಂಹಗಡ-ಗಡಾಯಿಕಲ್ಲು, ವಾಲಿಕುಂಜ, ನರಸಿಂಹ ಪರ್ವತ, ಗಂಗಡಿಕಲ್ಲು, ಕುರಿಂಗಲ್ ಸೇರಿ ಪ್ರಮುಖ ಸ್ಥಳಗಳಲ್ಲಿ ಟ್ರೆಕ್ಕಿಂಗೆ ನಿರ್ಬಂಧ ವಿಧಿಸಲಾಗಿದೆ.
ಕಟ್ಟಿನಹೊಳೆಯಿಂದ ಕೊಡಚಾದ್ರಿಗೆ ಪ್ರವಾಸಿಗರು, ಭಕ್ತರನ್ನು ಕೊಂಡೊಯ್ಯುವ ಜೀಪ್ ಸಂಚಾರವೂ ಸ್ಥಗಿತಗೊಂಡಿದೆ. ಕೊಲ್ಲೂರು, ನಿಟ್ಟೂರು, ಸಂಪೇಕಟ್ಟೆ, ಕಟ್ಟಿನಹೊಳೆಯಿಂದ ಪ್ರತಿದಿನ 200ಕ್ಕೂ ಹೆಚ್ಚು ಜೀಪ್‌ಗಳು ಸಂಚರಿಸುತ್ತಿದ್ದವು. ಈ ಆದೇಶದಿಂದ ಭಾನುವಾರದಿಂದಲೇ ಜೀಪ್ ಸಂಚಾರವೂ ನಿಂತಿದೆ.

ಮುನ್ನೆಚ್ಚರಿಕೆ ಕ್ರಮ: ಕಟ್ಟಿನಹೊಳೆಯಿಂದ ಕೊಡಚಾದ್ರಿ ಗಿರಿಗೆ ಮತ್ತು ವಳೂರು ಎಪಿಸಿ ಕ್ಯಾಂಪ್‌ನಿಂದ ಗಿರಿಗೆ ಚಾರಣವನ್ನು ನಿಷೇಧಿಸಲಾಗಿದೆ. ಕೊಡಚಾದ್ರಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಗಾಳಿ-ಮಳೆ ಅಧಿಕ. ಚಾರಣ ಮಾಡುವ ರಸ್ತೆಯು ಮಣ್ಣಿನ ರಸ್ತೆಯಾಗಿದ್ದು ಮಳೆ ಆರಂಭದ ನಂತರ ಸಂಪೂರ್ಣ ಹಾಳಾಗಿದೆ. ವ್ಯಾಪಕ ಮಳೆಯಿಂದ ರಸ್ತೆ ಪಕ್ಕದ ಮರಗಿಡಗಳು, ರಸ್ತೆಯ ಮಣ್ಣು ಕುಸಿಯುವ ಸಾಧ್ಯತೆ ಇದೆ. ಅನಾಹುತಕ್ಕೆ ಅವಕಾಶ ನೀಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಗಿರಿಗೆ ವಾಹನ ಸಂಚಾರದ ಜತೆಗೆ ಚಾರಣವನ್ನೂ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೂ ನಿಷೇಧ ಇರಲಿದ್ದು, ಕೊಡಚಾದ್ರಿ ಪರಿಸರದ ಜಲಪಾತಗಳ ಪ್ರವೇಶದ್ವಾರದಲ್ಲಿ, ಕಟ್ಟಿನಹೊಳೆ ಗೇಟ್, ವಳೂರು ಕ್ಯಾಂಪ್ ಸಿಬ್ಬಂದಿಯನ್ನು ನೇಮಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವನ್ಯಜೀವಿ ವಿಭಾಗದ ವಲಯ ಕಚೇರಿಗೆ ಆದೇಶಿಸಲಾಗಿದೆ.

ಜೀಪ್ ಮಾಲೀಕರಿಗೆ ನಷ್ಟ: ನಿರ್ಬಂಧದ ಆದೇಶ ಹೊರಬೀಳುತ್ತಿದ್ದಂತೆ ಜೀಪ್ ಮಾಲೀಕರು, ಚಾಲಕರು ಆತಂಕಕ್ಕೀಡಾಗಿದ್ದಾರೆ. ಕೊಡಚಾದ್ರಿಗೆ ನಿರ್ಬಂಧ ವಿಧಿಸಿದ್ದು ಸರಿಯಲ್ಲ. ಅರಶಿನಗುಂಡಿ ದುರಂತ ಆಧರಿಸಿ ಜಲಪಾತಗಳಿಗೆ ಪ್ರವೇಶವನ್ನು ತಾತ್ಕಾಲಿಕ ನಿಷೇಧಿಸಿದ್ದು ಸರಿ. ಆದರೆ ಕೊಡಚಾದ್ರಿಗೆ ಕೇವಲ ಪ್ರವಾಸಿಗರು ಬರುವುದಿಲ್ಲ. ಧಾರ್ಮಿಕ ಶ್ರದ್ಧಾಕೇಂದ್ರವೂ ಹೌದು. ರಾಜ್ಯದ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ ಕೇರಳ ಸೇರಿ ಹೊರರಾಜ್ಯದಿಂದಲೂ ಭಕ್ತರು ಬರುತ್ತಾರೆ. ಈ ನಿಷೇಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನು ಕೊಡಚಾದ್ರಿ ಗಿರಿ ಹತ್ತುವ ಜೀಪ್‌ಗಳನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಏಕಾಏಕಿ ನಿಷೇಧ ಮಾಡಿದರೆ ಅವರ ಬದುಕು ಮೂರಾಬಟ್ಟೆಯಾಗಲಿದೆ. ಅವಘಡಗಳು ನಡೆಯದಂತೆ ಸುರಕ್ಷತಾ ಕ್ರಮ ಕೈಗೊಳ್ಳಲಿ. ಆದರೆ ಅದು ಬಿಟ್ಟು ಸಂಪೂರ್ಣ ನಿರ್ಬಂಧ ವಿಧಿಸಿದರೆ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ನಿರ್ಬಂಧವನ್ನು ಸಡಿಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪ್ರವಾಸಿಗರಿಗೆ ಬೇಸರ: ಕೊಡಚಾದ್ರಿ ಗಿರಿ ಮತ್ತು ಹಿಡ್ಲುಮನೆ ಜಲಪಾತ ವೀಕ್ಷಿಸಲು ವಾರಾಂತ್ಯದಲ್ಲಿ ಸಾಕಷ್ಟು ಜನ ಆಗಮಿಸುತ್ತಾರೆ. ಮಳೆಗಾಲದಲ್ಲೇ ಪ್ರವಾಸಿಗರ ದಟ್ಟಣೆ ಹೆಚ್ಚು. ಕಳೆದ ವಾರಂತ್ಯದಲ್ಲೂ ಮಳೆ ಹೆಚ್ಚಾಗಿದ್ದ ಕಾರಣ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಏಕಾಏಕಿ ನಿಷೇಧ ಹೇರಿದ್ದರಿಂದ ಪ್ರವಾಸಿಗರು ನಿರಾಸೆಗೊಳಗಾದರು. ಒಮ್ಮೆ ಗಿರಿ ನೋಡಲು ಅವಕಾಶ ನೀಡುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ದುಂಬಾಲು ಬೀಳುತ್ತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಅವಕಾಶ ನೀಡದಿದ್ದರಿಂದ ಬೇಸರದಿಂದ ಹಿಂದಿರುಗಿದರು.

ಮುಂಗಾರು ಮಳೆ ಚೆನ್ನಾಗಿ ಆಗುತ್ತಿರುವ ಕಾರಣ ಜಲಪಾತಗಳು ಧುಮ್ಮಿಕ್ಕಲು ಆರಂಭಿಸಿವೆ. ಜನರ ಹಿತರಕ್ಷಣೆ ನಮ್ಮ ಜವಾಬ್ದಾರಿ. ಅಲ್ಲದೆ ಕೊಡಚಾದ್ರಿ ರಸ್ತೆ ಕೂಡ ಮಳೆಯಿಂದ ಹಾಳಾಗಿದ್ದು ಸುರಕ್ಷತೆ ದೃಷ್ಟಿಯಿಂದ ಜೀಪ್ ಸಂಚಾರ ಸೇರಿ ಟ್ರೆಕ್ಕಿಂಗ್ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು.ದೀಪಕ್ ನಾಯ್ಕವಲಯ ಅರಣ್ಯಾಧಿಕಾರಿ, ವನ್ಯಜೀವಿ ವಿಭಾಗ, ಕೊಲ್ಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net