ಚಾಮುಂಡಿಬೆಟ್ಟಕ್ಕೆ ಪೊಲೀಸ್ ನಾಕಾಬಂದಿ

14
Published on

ಮೈಸೂರು: ಬಾನು ಮುಷ್ತಾಕ್ ಉದ್ಘಾಟನೆ ವಿಷಯದಲ್ಲಿ ವಿವಾದ ಉಂಟಾಗಿದ್ದರಿಂದ ಅವರಿಗೆ ಬೆಂಗಾವಲಿನ ಭದ್ರತೆ ನೀಡಲಾಗಿತ್ತು. ದಸರಾ ಉದ್ಘಾಟನೆಗೆ ಹಾಸನದಿಂದ ಭಾನುವಾರವೇ ನಗರಕ್ಕೆ ಆಗಮಿಸಿದ್ದ ಅವರಿಗೆ ಜಿಲ್ಲಾಡಳಿತದಿಂದ ಸ್ವಾಗತಿಸಲಾಯಿತು. ಅವರು ವಾಸ್ತವ್ಯ ಹೂಡಿದ್ದ ಖಾಸಗಿ ಹೋಟೆಲ್‌ನಲ್ಲಿಯೂ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತಲ್ಲದೆ, ಹೊರಗಿನವರಿಗೆ ಯಾರಿಗೂ ಪ್ರವೇಶ ಇರಲಿಲ್ಲ.

ಪ್ರಥಮ ಬಾರಿಗೆ ಪಾಸ್ ವ್ಯವಸ್ಥೆ

ನಾಡಹಬ್ಬ ದಸರಾದ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು.

ಧಾರ್ಮಿಕ ಕಾರ್ಯಕ್ರಮವಾದ ದಸರಾ ಉದ್ಘಾಟನೆಗೆ ಮುಸ್ಲಿಂ ಸಮುದಾಯದ ಬಾನು ಮುಷ್ತಾಕ್ ಬೇಡ ಎನ್ನುವ ಹೋರಾಟ, ಪ್ರತಿಭಟನೆ, ಅಲ್ಲದೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತ್ತು. ಇದರಿಂದ ಉದ್ಘಾಟನೆ ವೇಳೆ ಪ್ರತಿಭಟನೆಗಳು ನಡೆಯಬಹುದು ಎನ್ನುವ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ, ಪಾಸ್ ಇದ್ದವರಿಗಷ್ಟೇ ಪ್ರವೇಶ ಕಲ್ಪಿಸಲಾಗಿತ್ತು. ಹೀಗಾಗಿ ಪಕ್ಷದ ಕಾರ್ಯಕರ್ತರು, ಹಾಸ್ಟೆಲ್, ಕಾಲೇಜು ವಿದ್ಯಾರ್ಥಿಗಳನ್ನು ಸಭಿಕರನ್ನಾಗಿ ಕರೆತರಲಾಗಿತ್ತು.

ಚಾಮುಂಡಿಬೆಟ್ಟಕ್ಕೆ ನಾಕಾಬಂದಿ

ದಸರಾ ಉದ್ಘಾಟನೆಗೆ ಪ್ರತಿಭಟನೆ ಮಾಡಬಹುದು ಎನ್ನುವ ಕಾರಣಕ್ಕೆ ಚಾಮುಂಡಿಬೆಟ್ಟಕ್ಕೆ ನಾಕಾಬಂದಿ ಹಾಕಲಾಗಿತ್ತು. ಬೆಟ್ಟವನ್ನು ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿಯೂ ಬಂದ್ ಮಾಡಿ, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ತಾವರೆಕಟ್ಟೆಯಿಂದ ಪ್ರವೇಶಿಸುವ ಮುಖ್ಯರಸ್ತೆಯ ದ್ವಾರದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬರುವ ಪ್ರತಿ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿತ್ತಲ್ಲದೆ, ಪಾಸ್ ಇಲ್ಲದವರನ್ನು ವಾಪಸ್ ಕಳುಹಿಸಲಾಗಿತ್ತು. ಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆ ಬಳಿಯಿಂದ ವೇದಿಕೆಗೆ ನೇರವಾಗಿ ತೆರಳಲು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಲ್ಲದೆ ಮೆಟಲ್ ಡಿಟೆಕ್ಟರ್‌ಗಳ ಮೂಲಕ ಪರೀಕ್ಷಿಸಿ ಒಬ್ಬೊಬ್ಬರನ್ನೇ ಒಳ ಬಿಡಲಾಯಿತು.

ಪ್ರತಿಭಟಿಸಿದ್ದವರು ವೇದಿಕೆಯಲ್ಲಿ!

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಹ್ವಾನವನ್ನು ವಿರೋಧಿಸಿ ಚಾಮುಂಡಿಬೆಟ್ಟ ಚಲೋದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಚ್ಚರಿ ಮೂಡಿಸಿದರು. ಜಿಲ್ಲೆಯಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವವರು ಅವರೊಬ್ಬರೇ ಆಗಿದ್ದು, ಶಿಷ್ಟಾಚಾರದಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಪ್ರದಾಯ ಪಾಲಿಸಿದರು. ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದರಾದ ರಾಜವಂಶಸ್ಥ ಯದುವೀರ್ ಅವರು ಅರಮನೆ ದಸರಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದರಿಂದ ಉದ್ಘಾಟನೆಯಿಂದ ದೂರು ಉಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net