ಗಂಭೀರ ಕಾಯಿಲೆ ನೆಪದಲ್ಲಿ ಮಂಗಳೂರಿಗೆ ಬರುತ್ತಿರುವ ಕೇರಳಿಗರು!

seiz
Published on

ಉಳ್ಳಾಲ: ಸುಪ್ರೀಂಕೋರ್ಟ್ ತೀರ್ಪು ಪ್ರಕಾರ ತಲಪಾಡಿಯಲ್ಲಿ ಗಡಿ ತೆರೆಯಲಾಗಿದ್ದು, ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇರಳಿಗರು ಗಂಭೀರ ಕಾಯಿಲೆ ನೆಪದಲ್ಲಿ ಮಂಗಳೂರಿನ ಆಸ್ಪತ್ರೆಗೆ ಬಂದು ಹೋಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅತ್ಯಂತ ತುರ್ತು ಪ್ರಕರಣ, ಕೇರಳದಲ್ಲಿ ಚಿಕಿತ್ಸೆ ಸಾಧ್ಯವೇ ಇಲ್ಲ ಎಂದಾದಲ್ಲಿ ವೈದ್ಯರ ಶಿಫಾರಸು ಪತ್ರದೊಂದಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ರೋಗಿಗಳು ಸರ್ಕಾರಿ ಆಂಬುಲೆನ್ಸ್ನಲ್ಲೇ ಬರಬೇಕು ಎಂದು ನಿಯಮ ವಿಧಿಸಲಾಗಿತ್ತು.

ಬುಧವಾರ ಗಡಿ ತೆರವು ಮಾಡಲಾಗಿದ್ದು, ಮೂವರು ಮಹಿಳಾ ರೋಗಿಗಳು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಬಂದಿದ್ದರು. ಅವರ ಪೈಕಿ ಇಬ್ಬರಿಗೆ ಇದ್ದದ್ದು ತಲೆನೋವು ಮಾತ್ರ. ಎಂಆರ್‌ಐ ಸ್ಕ್ಯಾನಿಂಗ್ ಮಾಡಲು ವೈದ್ಯರು ಸೂಚಿಸಿದ್ದರೂ, ಒಪ್ಪದ ಮಹಿಳೆಯರು ಆಸ್ಪತ್ರೆಯವರಿಗೆ ತಿಳಿಸದೆಯೇ ನಾಪತ್ತೆಯಾಗಿದ್ದಾರೆ. ಓರ್ವ ಮಹಿಳೆಗೆ ಜ್ವರ, ತಲೆನೋವು ಇತ್ತು. ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.

ಗುರುವಾರವೂ ಓರ್ವ ಮಹಿಳೆ ಆಸ್ಪತ್ರೆಗೆ ಆಂಬ್ಯುಲೆನ್ಸ್ನಲ್ಲಿ ಬಂದಿದ್ದಾರೆ. ಆದರೆ ಆ ಮಹಿಳೆಗೂ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳೇನೂ ಇರಲಿಲ್ಲ. ಆದರೆ ತಪಾಸಣೆಗೆ ಮೊದಲೇ ಮಹಿಳೆ ಆಸ್ಪತ್ರೆಯವರಿಗೆ ಮಾಹಿತಿ ನೀಡದೆ ಹೋಗಿದ್ದಾರೆ ಎನ್ನಲಾಗಿದೆ. ಗಡಿ ರಸ್ತೆ ತೆರೆಯುವ ಮೊದಲು ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಒಪ್ಪಿದ್ದ, ಗಡಿ ತೆರವುಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದ ಕೇರಳಿಗರು ಇದೀಗ ಆಸ್ಪತ್ರೆಗೆ ಬಂದು ವೈದ್ಯರು, ಸಿಬ್ಬಂದಿಯನ್ನು ಸತಾಯಿಸುತ್ತಿದ್ದಾರೆ. ಗಂಭೀರ ಸಮಸ್ಯೆ ಇಲ್ಲದಿದ್ದರೂ, ಅಲ್ಲಿನ ವೈದ್ಯರು ಶಿಫಾರಸು ಪತ್ರ ನೀಡುತ್ತಿರುವುದೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕರೊನಾ ಭಯಕ್ಕೆ ಮುಚ್ಚಿದ್ದ ಗಡಿ ರಸ್ತೆ: ಕಾಸರಗೋಡಿನಲ್ಲಿ ಅತಿ ಹೆಚ್ಚು ಕರೊನಾ ವೈರಸ್ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಗಡಿಭಾಗಗಳನ್ನು ಬಂದ್ ಮಾಡಿತ್ತು. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೂ ಮಂಗಳೂರಿನ ಆಸ್ಪತ್ರೆಗೆ ಹೋಗಲು ಪೊಲೀಸರು ಬಿಡದ ಕಾರಣ ಕಾಸರಗೋಡಿನಲ್ಲಿ ಕೆಲವು ರೋಗಿಗಳು ಸಾವನ್ನಪ್ಪಿದ್ದರು. ಈ ಬಗ್ಗೆ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಕೆಲ ಷರತ್ತಿನ ಮೇರೆಗೆ ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಗಡಿ ತೆರೆಯಲಾಗಿದೆ.

ಚಿಕಿತ್ಸೆ ಲಭಿಸದೆ ಇನ್ನೋರ್ವ ಸಾವು

ಮಂಜೇಶ್ವರ: ಜಿಲ್ಲೆಯ ಗಡಿಭಾಗದಲ್ಲಿ ಚಿಕಿತ್ಸೆ ಲಭಿಸದೆ ಮತ್ತೊಂದು ಸಾವು ಪ್ರಕರಣ ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯ ಗಡಿಭಾಗದಲ್ಲಿ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿದವರ ಸಂಖ್ಯೆ ಹದಿಮೂರಕ್ಕೇರಿದೆ. ಉಪ್ಪಳ ನಿವಾಸಿ ಅಬ್ದುಲ್ ಸಲೀಮ್(56) ಸರಿಯಾದ ಚಿಕಿತ್ಸೆ ಲಭಿಸದೆ ಬುಧವಾರ ಸಾವನ್ನಪ್ಪಿದವರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಲೀಂ ಅವರನ್ನು ಎರಡು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಲಾಯಿತು. ಆದರೆ ಗಡಿಯಲ್ಲಿ ಪೊಲೀಸರು ಬಿಡಲಿಲ್ಲ. ಅನಿವಾರ್ಯವಾಗಿ ಹಿಂತಿರುಗುವಾಗ ಸಲೀಮ್ ದಾರಿ ಮಧ್ಯೆ ಮೃತಪಟ್ಟರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮಂಗಳೂರು ಆಸ್ಪತ್ರೆಗೆ ಸಾಗಲು ತೆರಳಿದ ಹಲವಾರು ರೋಗಿಗಳನ್ನು ಬುಧವಾರ ಸಣ್ಣ ಸಣ್ಣ ಕಾರಣಗಳನ್ನು ಮುಂದಿಟ್ಟು ಪೊಲೀಸರು ಹಿಂತಿರುಗಿ ಕಳಿಸಿರುವುದು ಕಂಡುಬಂದಿತ್ತು. ಬುಧವಾರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ರೋಗಿಯಾದ ತಳಂಗರೆಯ ಮಹಿಳೆಯನ್ನೂ ಪೊಲೀಸರು ಮೊದಲಿಗೆ ಬಿಡಲಿಲ್ಲ. ಆದರೆ, ಕೊನೆಗೂ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೂ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಒಂದೂವರೆ ತಾಸು ನಿಲ್ಲಿಸಿ ಬಳಿಕ ಚಿಕಿತ್ಸೆ ನೀಡದೆ ಕಳಿಸಿದರು ಎಂದು ತಿಳಿದು ಬಂದಿದೆ. ಕಾಞಂಗಾಡ್ ಚೆಕನ್ನೂರು ನಿವಾಸಿ ಪ್ರಕಾಶ್ ಎಂಬುವರ ಪತ್ನಿಯನ್ನು ರಕ್ತಸ್ರಾವದಿಂದಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ತಲುಪಿಸ ಲಾಯಿತಾದರು ಶಸ್ತ್ರಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ವಾಪಸ್ ಕಳಿಸಲಾಗಿದೆ ಎಂದು ದೂರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net