ಪ್ರಾಣಿಪ್ರಿಯರಿಗೆ ಪ್ರವೇಶ ದರ ಏರಿಕೆ ಬರೆ

Untitled-5
Published on

ನವೀನ್​ಶೆಟ್ಟಿ ಕೆರಾಡಿ ಆನೇಕಲ್​

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಟ್ಟ ಜೈವಿಕ ಉದ್ಯಾನವನದ ಪ್ರವೇಶ ದರವನ್ನು ಶೇ.20 ಏರಿಸಲು ಮೃಗಾಲಯದ ಆಡಳಿತ ಮಂಡಳಿ ಮುಂದಾಗಿದ್ದು, ಪ್ರವಾಸಿಗರಿಗೆ ಟಿಕೆಟ್​ ದರ ಏರಿಕೆಯ ಬಿಸಿ ತಟ್ಟಲಿದೆ. ಹೌದು..! ಆಗಸ್ಟ್​ 1ರಿಂದ ದರ ಏರಿಕೆಗೆ ರಾಜ್ಯ ಸರ್ಕಾರ ಸೂಚಿಸಿದ್ದು, ವಯಸ್ಕರಿಗೆ ಹಾಲಿ ಇದ್ದ ಟಿಕೆಟ್​ ದರ 100 ರೂ., 120 ರೂ. ಆಗಲಿದೆ. ಹಿರಿಯ ನಾಗರಿಕರಿಗಿದ್ದ 60 ರೂ.ದರವಿನ್ನು 70 ರೂ., ಮಕ್ಕಳಿಗಿದ್ದ 50 ರೂ. 60 ರೂ. ಆಗಲಿದೆ. ಸಫಾರಿಗೆ ಕಾಂಬೋ ಪ್ಯಾಕ್​ದರ ಕೂಡ ಹೆಚ್ಚಳವಾಗಲಿದ್ದು, ವಾರದ ದಿನಗಳಲ್ಲಿ 350 ರೂ.ನಿಂದ 370ಕ್ಕೆ ಏರಿಕೆಯಾದರೆ, ವಾರದ ಕೊನೇ ದಿನಗಳಲ್ಲಿ 400 ರೂಪಾಯಿ ಇರುವ ಹಾಲಿ ದರ 420ಕ್ಕೆ ಏರಿಕೆ ಆಗಲಿದೆ.

ಪ್ರಾಣಿಗಳ ಆಹಾರ, ಸಿಬ್ಬಂದಿ ವೇತನ ಹೆಚ್ಚಳಕ್ಕೆ ಕ್ರಮ: ಪ್ರಾಣಿಗಳ ಆಹಾರ ಮತ್ತು ನಿರ್ವಹಣೆ ಸಿಬ್ಬಂದಿ ವೇತನ ಹೆಚ್ಚಳವಾಗಿದೆ. ಆದರೆ ಕಳೆದ ಐದು ವರ್ಷದಿಂದ ಮೃಗಾಲಯದ ಟಿಕೆಟ್​ ದರ ಏರಿಕೆ ಆಗಿಲ್ಲ. ಬನ್ನೇರುಟ್ಟ ಜೈವಿಕ ಉದ್ಯಾನವನ ಸ್ವಾಯತ್ತ ಸಂಸ್ಥೆ, ಪ್ರವಾಸಿಗರ ಟಿಕೆಟ್​ ಹಣವೇ ಆದಾಯದ ಮೂಲವಾಗಿದ್ದು, ಶೇ. 50 ದರ ಹೆಚ್ಚಳ ಮಾಡುವ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಶೇ.20 ಟಿಕೆಟ್​ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಮೃಗಾಲಯ ಪ್ರಾಧಿಕಾರದ ಆದೇಶದಂತೆ ಆ.1ರಿಂದ ಹೊಸದರ ಜಾರಿಗೆ ಬರಲಿದೆ ಎಂದು ಬನ್ನೇರುಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್​ ತಿಳಿಸಿದ್ದಾರೆ.

ಪ್ರವಾಸಿಗರಿಗೆ ಹೊರೆ : ಮೃಗಾಲಯದ ಆಡಳಿತ ಮಂಡಳಿ ದರ ಏರಿಕೆ ಆದೇಶ ಬೆನ್ನಲ್ಲೇ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದೆ. ಮನರಂಜನೆಗಾಗಿ, ಮಕ್ಕಳಿಗೆ ಪ್ರಾಣಿಗಳನ್ನು ಪರಿಚಯಿಸಲು ದೂರದ ಊರುಗಳಿಂದ ಕುಟುಂಬದೊಂದಿಗೆ ಪ್ರವಾಸಿಗರು ಬರುತ್ತಾರೆ. ದೇಶ&ವಿದೇಶಗಳಿಂದಲೂ ಸಾಕಷ್ಟು ಮಂದಿ ಇಲ್ಲಗೆ ಭೇಟಿ ನೀಡುತ್ತಾರೆ. ಆದಾಯ ಉತ್ತಮವಾಗಿದ್ದರೂ ಪ್ರವೇಶ ದರ ಏರಿಕೆ ಪ್ರವಾಸಿಗರಿಗೆ ಹೊರೆಯಾಗಲಿದ್ದು, ಮೃಗಾಲಯಕ್ಕೆ ಭೇಟಿ ನೀಡುವವವರ ಸಂಖ್ಯೆ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಿದ್ದಾರೆ.

ಒಂದೇ ದಿನಕ್ಕೆ ಲಾಂತರ ರೂ. ಕಲೆಕ್ಷನ್​ : ಬನ್ನೇರುಟ್ಟ ಜೈವಿಕ ಉದ್ಯಾನವನ ಬೆಂಗಳೂರಿಗೆ ಹೊಂದಿಕೊಂಡಿರುವುದರಿಂದ ಮಹಾನಗರ ಜನರಲ್ಲದೆ ರಾಜಧಾನಿಗೆ ಬರುವವರು ಸಹ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಇದರಿಂದ ಕೋಟ್ಯಂತರ ರೂಪಾಯಿ ಆದಾಯ ಮೃಗಾಲಯಕ್ಕೆ ಹರಿದು ಬರುತ್ತದೆ. ಬರೀ ವಾರಾಂತ್ಯದ ಒಂದೇ ದಿನದಲ್ಲಿ ಲಾಂತರ ರೂ. ಸಂಗ್ರಹವಾಗುತ್ತದೆ. ಆದರೂ ಪ್ರಾಣಿಗಳ ನಿರ್ವಹಣೆ, ಸಿಬ್ಬಂದಿ ವೇತನ ಏರಿಕೆ ನೆಪದಲ್ಲಿ ಪ್ರವೇಶ ದರ ಏರಿಕೆ ಏಕೆ? ಎಂಬ ಪ್ರಶ್ನೆ ಪ್ರವಾಸಿಗರಲ್ಲಿ ಮೂಡಿದೆ.

ಭಾಗ್ಯಗಳ ಬಿಸಿ ತಟ್ಟಿತೆ? : ರಾಜ್ಯ ಸರ್ಕಾರ ಈಗಾಗಲೇ ಉಚಿತ ಗ್ಯಾರಂಟಿಗಳನ್ನು ನೀಡುತ್ತಿದ್ದು, ಈ ಭಾಗ್ಯಗಳಿಂದ ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆಯಾಗಿದೆ ಎಂಬ ಆರೋಪವಿದ್ದು, ಇದೇ ಕಾರಣಕ್ಕೆ ಈಗಾಗಳೇ ವಿವಿಧ ದರ ಏರಿಕೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈಗ ಮೃಗಾಲಯಗಳ ದರ ಏರಿಕೆ ಮಾಡಿರುವುದಕ್ಕೆ ಸಹ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯೇ ಕಾರಣ ಎನ್ನಲಾಗುತ್ತಿದೆ.

ಬನ್ನೇರುಟ್ಟ ಜೈವಿಕ ಉದ್ಯಾನವನ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಂಡಿದೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಪ್ರಾಣಿಗಳ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕೆ ಸರ್ಕಾರದಿಂದ ಅನುದಾನ ಪಡೆಯಲಿ. ಅದನ್ನು ಬಿಟ್ಟು ಪ್ರವಾಸಿಗರಿಗೆ ದರ ಏರಿಕೆ ಮಾಡಿ ಪ್ರಾಣಿಗಳನ್ನು ನೋಡಲು ಬರುವವರ ಮೇಲೆ ಬರೆ ಎಳೆಯಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಯಾಗುವ ಸಂಭವವಿದೆ. > ಪೃಥ್ವಿ ಪ್ರವಾಸಿಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net