

ಬೆಳ್ತಂಗಡಿ: ಗ್ರಾಮೀಣ ಜನರ ಉನ್ನತಿಗೆ ಗ್ರಾಮೀಣ ಉದ್ಯಮಶೀಲತೆ ಮತ್ತು ಅದರ ಅಭಿವೃದ್ಧಿ ಪ್ರಸ್ತುತ ಅಗತ್ಯ ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು. ಶುಕ್ರವಾರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ಆಯೋಜಿಸಿದ ಪ್ರವರ್ಥಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಣ ಅಸಮಾನತೆ ಕಡಿಮೆಗೊಳಿಸುವಲ್ಲಿ, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ಉದ್ಯಮಶೀಲತೆ ನೆರವಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಕೂಡ ತನ್ನ ಎನ್ಜಿಒಗಳಾದ ರುಡ್ಸೆಟ್, ಸಿರಿ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಉದ್ಯಮಶೀಲತೆ ಬೆಂಬಲಿಸುತ್ತಿದೆ ಎಂದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದ ಒಂಬುಡ್ಸ್ಮನ್ ಡಾ.ಬಾಲು ಕೆಂಚಪ್ಪ ಮಾತನಾಡಿ, ಗ್ರಾಮೀಣ ಉದ್ಯಮಶೀಲತೆಗೆ ಇರುವ ಸರ್ಕಾರದ ಬೆಂಬಲ ಯೋಜನೆಗಳನ್ನು ಜನರಿಗೆ ತಲುಪಿಸಲು ರುಡ್ಸೆಟ್ನಂತಹ ಎನ್ಜಿಒಗಳು ಕೂಡ ಹೆಚ್ಚಬೇಕು. ಭಾರತದಲ್ಲಿ ಯುಪಿಐ ವ್ಯವಸ್ಥೆ ಉತ್ತಮವಾಗಿದೆ. ಜಾಗತಿಕ ಡಿಜಿಟಲ್ ವ್ಯವಹಾರದ 50 ಪ್ರತಿಶತ ವ್ಯವಹಾರಗಳು ಭಾರತದಲ್ಲಿ ನಡೆಯುತ್ತಿವೆ. ವಿದೇಶಗಳು ಕೂಡ ಈ ನಿಟ್ಟಿನಲ್ಲಿ ಹಿಂದಿವೆ ಎಂದರು. ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿದರು. ಆಸ್ಟ್ರೇಲಿಯಾದ ವಿಶ್ರಾಂತ ಪ್ರಾಧ್ಯಾಪಕ ಡಾ.ಕಾಳಿಯಪ್ಪ ಕಾಳಿರಾಜನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಮುಖ್ಯ ಸಲಹೆಗಾರ, ರಾಜ್ಯ ಯೋಜನಾ ಮಂಡಳಿ ಸದಸ್ಯ ಡಾ.ಜಿ.ವಿ.ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳನ್ನು ಸನ್ಮಾನಿಸಲಾಯಿತು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿದರು. ಅರ್ಥಶಾಸ್ತ್ರ ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಗಣರಾಜ ಕೆ. ವಂದಿಸಿದರು. ಅಶ್ವಿತ್ ಎಚ್.ಆರ್. ಮತ್ತು ಅಶ್ವಿನಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ದೇಶದ ವಿವಿಧೆಡೆಯಿಂದ 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯಮಶೀಲತೆಗೆ ಹೇರಳ ಅವಕಾಶಗಳಿವೆ. ಆದರೆ ಆಳಕ್ಕಿಳಿದು ಮುನ್ನಡೆಯುವವರ ಕೊರತೆಯಿದೆ. ವಿಭಿನ್ನ ಪರಿಕಲ್ಪನೆಯೊಂದಿಗೆ ಉದ್ಯಮಶೀಲರಾಗಲು ಮುಂದೆ ಬರುವ ನೂರು ಮಂದಿ ಯುವಕರಿಗೆ ನಾನು ಹಣಕಾಸು ಬೆಂಬಲ ನೀಡಲು ತಯಾರಿದ್ದೇನೆ. ಕಸದಿಂದ ಗೊಬ್ಬರ ತಯಾರಿಸುವ ಯೋಜನೆಯೊಂದರ ಬಗ್ಗೆ ಉಜಿರೆ ಗ್ರಾಪಂನೊಂದಿಗೆ ತಾನು ಕೆಲಸ ಮಾಡುತ್ತಿದ್ದೇನೆ. ಶಶಿಧರ ಶೆಟ್ಟಿ ಬರೋಡ, ಉದ್ಯಮಿ