

ಹಾಸನ/ಬೇಲೂರು: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರು ಬರುವ ಜಿಲ್ಲೆಯ ವಿಶ್ವವಿಖ್ಯಾತ ದೇವಾಲಯ ಹಾಗೂ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬೇಲೂರಿನ ಶ್ರೀಚನ್ನಕೇಶವಸ್ವಾಮಿ, ಹಳೇಬೀಡಿನ ಹೊಯ್ಸಳೇಶ್ವರ, ಶ್ರವಣಬೆಳಗೊಳ, ಅರಸೀಕೆರೆಯ ಚಂದ್ರಮೌಳೇಶ್ವರ ದೇವಾಲಯ, ಸಕಲೇಶಪುರದ ಮಂಜ್ರಾಬಾದ್ ಕೋಟೆ, ಹಾಸನದ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮಂಗಳವಾರ ಬೀಗ ಜಡಿದಿದ್ದು ಪ್ರವಾಸಿಗರಿಗೆ ನಿರಾಸೆಯುಂಟಾಗಿದೆ. ಹಳೇಬೀಡು ದೇವಸ್ಥಾನದ ಮುಖ್ಯದ್ವಾರ ಹಾಗೂ ಎಲ್ಲ ಗೇಟ್‌ಗಳನ್ನು ಬಂದ್ ಮಾಡಲಾಗಿದೆ.
ಹೊಯ್ಸಳೇಶ್ವರ ದೇಗುಲದಲ್ಲಿ ಪೂಜಾ ಕೈಂಕರ್ಯ ನಡೆಸಲು ಅಡ್ದಿಯಿಲ್ಲವಾದರೂ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಜಿಲ್ಲಾದ್ಯಂತ ಪುರಾತತ್ವ ಇಲಾಖೆಗೆ ಸೇರಿದ 24 ದೇವಾಲಯಗಳಿದ್ದು ವಿದೇಶಿ ಪ್ರವಾಸಿಗರು ಹೆಚ್ಚಾಗಿ ಬರುವ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಮಾಹಿತಿ ಕೊರತೆಯಿಂದಾಗಿ ದೇವಾಲಯಗಳಿಗೆ ಜನರು ಬಂದು ವಾಪಸ್ಸಾಗುತ್ತಿದ್ದಾರೆ. ಸಕಲೇಶಪುರ ಮಂಜ್ರಾಬಾದ್ ಕೋಟೆ ವೀಕ್ಷಣೆಗೆ ಬೆಂಗಳೂರು, ಮಂಗಳೂರು ಕಡೆಯಿಂದ ನೂರಾರು ಜನರು ಬರುತ್ತಾರೆ. ಆದರೆ ಮಂಗಳವಾರ ಕೋಟೆಯ ಮುಖ್ಯ ಗೇಟ್‌ಗೆ ಬೀಗ ಜಡಿದಿದ್ದು ಮಾ. 31ರವರೆಗೆ ಪ್ರವೇಶ ನಿಷೇಧ ಎಂಬ ಸೂಚನಾ ಫಲಕ ಅಳವಡಿಸಲಾಗಿದೆ.
ಅರ್ಚಕರಿಂದಲೇ ಬಂದ್: ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಶ್ರೀ ಸಾಯಿ ಬಾಬಾ ಮಂದಿರದ ಗೇಟ್‌ಗೆ ಅರ್ಚಕರೇ ಬೀಗ ಜಡಿದಿದ್ದಾರೆ. ಪ್ರತಿ ದಿನ ಸಾವಿರಾರು ಭಕ್ತರು ದೇವರ ಪೂಜೆಯಲ್ಲಿ ಭಾಗವಹಿಸುತ್ತಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಜನದಟ್ಟಣೆಯಾಗದಂತೆ ಎಚ್ಚರ ವಹಿಸಲು ಸೂಚಿಸಿದ್ದರು. ಕರೊನಾ ಆತಂಕ ಹೆಚ್ಚಿರುವ ಕಾರಣ ಅರ್ಚಕರೇ ದರ್ಶನ ಇರುವುದಿಲ್ಲ ಎಂಬ ಸೂಚನಾ ಫಲಕ ಅಳವಡಿಸಿದ್ದಾರೆ. ಎಲ್ಲರೂ ಸ್ವಯಂಪ್ರೇರಿತರಾಗಿ ಜನಸಂದಣಿಗೆ ಅವಕಾಶ ಮಾಡಿಕೊಡಬಾರದೆಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮನವಿ ಮಾಡಿದ್ದಾರೆ.
ದೂರದಿಂದಲೇ ಸ್ವಾಮಿ ದರ್ಶನ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲ ಬಂದ್ ಮಾಡಿರುವುದರಿಂದ ಭಕ್ತರು ದೂರದಿಂದಲೇ ಕೈ ಮುಗಿದು ವಾಪಸ್ಸಾಗುತ್ತಿದ್ದಾರೆ. ವಿಶ್ವ ವಿಖ್ಯಾತ ಪ್ರವಾಸಿ ತಾಣವಾದ ಬೇಲೂರಿಗೆ ದೇಶ ವಿದೇಶಗಳಿಂದ ನಿತ್ಯ ನೂರಾರು ಪ್ರವಾಸಿಗರು ಬರುತ್ತಿದ್ದರು.
ದೇಗುಲದ ಬಾಗಿಲು ಮುಚ್ಚಿರುವ ಮಾಹಿತಿ ಇಲ್ಲದೆ ಪೂಜೆ ಸಲ್ಲಿಸಲು ಆಗಮಿಸಿದ ಪ್ರವಾಸಿಗರು ಮತ್ತು ಭಕ್ತರು ನಿರಾಸೆ ಅನುಭವಿಸಿದರು. ಭಕ್ತರಿಗೆ ಮಧ್ಯಾಹ್ನ ಪ್ರಸಾದ ರೂಪದಲ್ಲಿ ವಿತರಿಸುತ್ತಿದ್ದ ಅನ್ನ ದಾಸೋಹ ಭವನವನ್ನು ಬಂದ್ ಮಾಡಲಾಗಿದೆ. ಚನ್ನಕೇಶವಸ್ವಾಮಿ ದೇಗುಲ ಆವರಣ ಬಿಕೋ ಎನ್ನುತ್ತಿದ್ದರೆ, ಜನರಿಲ್ಲದ ಕಾರಣ ಮುಂಭಾಗದ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿವೆ.
ಚನ್ನಕೇಶವ ಸ್ವಾಮಿಗೆ ಎಂದಿನಂತೆ ಅರ್ಚಕರು ದಾರ್ಮಿಕ ದತ್ತಿ ಇಲಾಖೆ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪೂಜೆ ನಡೆಸುತ್ತಿದ್ದಾರೆ.
ಏ.5 ರಂದು ನಡೆಯಲಿರುವ ಶ್ರೀಚನ್ನಕೇಶವ ಸ್ವಾಮಿ ದಿವ್ಯ ಬ್ರಹ್ಮ ರಥೋತ್ಸವದ ಅಂಗವಾಗಿ 15 ದಿನಗಳ ಕಾಲ ನಡೆಯಬೇಕಿರುವ ಉತ್ಸವಾದಿ ಕಾರ್ಯಕ್ರಮಗಳು ಮಾ.28 ರಿಂದ ಪ್ರಾರಂಭವಾಗಬೇಕು. ಆದರೆ ಕರೊನಾ ಧಾರ್ಮಿಕ ಕಾರ್ಯಕ್ರಮದ ಮೇಲೆ ಕಾರ್ಮೋಡ ಕವಿದಂತಾಗಿದೆ.