

ದಾವಣಗೆರೆ: ಮೇ 7 ರಂದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಮತದಾರರು ತಪ್ಪದೇ ಬಂದು ಮತ ಚಲಾಯಿಸಬೇಕು ಎಂದು ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಶಾಲಾ, ಕಾಲೇಜುಗಳ ಸಹಯೋಗದಲ್ಲಿ ನಗರದ ಗುಂಡಿ ಸರ್ಕಲ್ನಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಹಮ್ಮಿಕೊಂಡಿದ್ದ ನಮ್ಮ ನಡೆ, ಮತಗಟ್ಟೆ ಕಡೆ ಜಾಥಾ ನಂತರ ಸ್ವೀಪ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ 1693 ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯ ವ್ಯವಸ್ಥೆ, ರ‌್ಯಾಂಪ್‌ಗಳು ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಮತದಾರರು ಮತಗಟ್ಟೆಗೆ ಬಂದು ಪರಿಶೀಲಿಸಬಹುದು. ಜಿಲ್ಲೆಯ ಎಲ್ಲ ಮತಗಟ್ಟೆಗಳ ಮೇಲೆ ಸ್ವೀಪ್ ಧ್ವಜ ಹಾರಿಸಲಾಗಿದೆ ಎಂದು ಹೇಳಿದರು.
ಸ್ವೀಪ್ ಕಾರ್ಯಕ್ರಮದಲ್ಲಿ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದಾರೆ. ಇದೇ ರೀತಿ ಮತದಾನದ ದಿನ ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಹಾಕಬೇಕು ಎಂದರು.
ಮೊದಲ ಹಂತದಲ್ಲಿ ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ 81.64 ರಷ್ಟು ಮತದಾನವಾಗಿದ್ದು, ದಾವಣಗೆರೆ ಕ್ಷೇತ್ರದಲ್ಲಿ ಇದಕ್ಕೂ ಹೆಚ್ಚಿನ ಸಾಧನೆ ತೋರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ತಪ್ಪದೆ ಮತದಾನದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 17,09,244 ಮತದಾರರಿದ್ದು, ಇದರಲ್ಲಿ ದಾವಣಗೆರೆ ಜಿಲ್ಲೆಯ ಪಾಲು 14,85,271. ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದು 1000 ಪುರುಷರಿಗೆ 1006 ಮಹಿಳೆಯರಿದ್ದಾರೆ. ಮಹಿಳೆಯರು ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲಿದ್ದು, ಗುರಿ ಸಾಧನೆ ವಿಶ್ವಾಸವಿದೆ ಎಂದರು.
ಸ್ವೀಪ್ ರಾಯಭಾರಿ ಹಾಗೂ ಚಲನಚಿತ್ರ ನಟ ಪೃಥ್ವಿ ಶಾಮನೂರು ಮಾತನಾಡಿ, ಮತದಾನದ ದಿನ ಎಲ್ಲರಿಗೂ ರಜಾ ನೀಡಲಾಗುತ್ತದೆ. ಆ ದಿನ ರಜಾ ಮೂಡ್‌ಗೆ ಜಾರದೇ ಮತ ಚಲಾವಣೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ನಮ್ಮ ನಡೆ ಮತಗಟ್ಟೆ ಕಡೆ ಅಂಗವಾಗಿ 20 ಕೆ.ಜಿ. ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿಕೆ ಮಾಡಲಾಯಿತು.