ಹೊಸ ಬಜೆಟ್‌ಗೆ ಉತ್ಸಾಹ, ಜಾರಿಗೆ ನಿರ್ಲಕ್ಷ್ಯ: ಇದು ಬಿಬಿಂಪಿ ವರಸೆ !

bbmp office
Published on

ಆರ್​​.ತುಳಸಿಕುಮಾರ್​​​

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025-26ನೇ ಸಾಲಿಗಾಗಿ ಹೊಸ ಬಜೆಟ್ ತಯಾರಿ ನಡೆಸಿದ್ದು, ಇನ್ನೆರಡು ವಾರದೊಳಗೆ ಮಂಡನೆಯಾಗಲಿದೆ. ಆದರೆ, ಪ್ರತೀ ವರ್ಷ ಪ್ರಕಟಿಸಲಾಗುವ ಆಯವ್ಯಯದಲ್ಲಿನ ಹೆಚ್ಚಿನ ಕಾರ್ಯಕ್ರಮಗಳು ಆಯಾ ಸಾಲಿನ ಅವಧಿ ಮುಗಿದರೂ ಟೇಕ್ ಅಫ್​​ ಅಗುವುದಿಲ್ಲ. ಬಜೆಟ್ ಮಂಡಿಸಲು ಇರುವ ಉತ್ಸಾಹ, ಅನುಷ್ಠಾನಕ್ಕೆ ಕಾಳಜಿ ವಹಿಸುತ್ತಿಲ್ಲ ಎಂಬ ಅಪವಾದ ಪಾಲಿಕೆ ಹೊತ್ತುಕೊಂಡಿದೆ.

ಮಹಾನಗರದ ಮೂಲಸೌಕರ್ಯ ಸೇರಿ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡುವ ಹೊಣೆ ಪಾಲಿಕೆಯದ್ದಾಗಿದೆ. ಜತೆಗೆ ನಾಗರಿಕರು ಎದುರಿಸುವ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಗುರುತರ ಹೊಣೆ ಕೂಡ ವಹಿಸಿದೆ. ಇದಕ್ಕಾಗಿ ವರ್ಷವಿಡೀ ನಿರಂತರವಾಗಿ ಜನರಿಗೆ ಸೌಲಭ್ಯ ಒದಗಿಸಲು ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೂ, ಸಮರ್ಪಕವಾದ ವಾರ್ಷಿಕ ಯೋಜನಾ ನಕ್ಷೆ, ಮಾರ್ಗಸೂಚಿ ಇತ್ಯಾದಿ ಆದೇಶಗಳಡಿ ಬಜೆಟ್ ಪ್ರಕಟಿತ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಚೌಕಟ್ಟು ಹಾಕಿಕೊಳ್ಳದಿರುವುದು ಆಯವ್ಯಯ ಕಾರ್ಯರೂಪಕ್ಕೆ ಬಾರದಿರಲು ಕಾರಣ ಎಂಬುದಾಗಿ ಹಲವು ಪುರಪಿತೃಗಳು ಪಾಲಿಕೆ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದಾರೆ.

ಅನುದಾನ ನಿಗದಿಯಾಗದೆ ತೆರೆಮರೆಗೆ:

ಬಿಬಿಎಂಪಿ ಬಜೆಟ್‌ನಲ್ಲಿ ಪ್ರಕಟಿಸುವ ಎಲ್ಲ ಯೋಜನೆಗಳಿಗೂ ಅನುದಾನ ನಿಗದಿ ಆಗಿರುವುದಿಲ್ಲ. ಪ್ರಮುಖ ಯೋಜನೆಗಳು, ಆದ್ಯತಾ ಕಾರ್ಯಕ್ರಮಗಳು, ವಾರ್ಷಿಕ ನಿರ್ವಹಣೆ, ಅಧಿಕಾರಿ/ಸಿಬ್ಬಂದಿ ವೇತನ-ಭತ್ಯೆಗೆ ಹಣ ನಿಗದಿಯಾಗಿರುತ್ತದೆ. ಕೆಲವೊಂದಕ್ಕೆ ರಾಜ್ಯ ಸರ್ಕಾರ ಸಹಿತ ವಿವಿಧ ನೆರವಿನ ನಿಧಿ, ಸಾಲ ಬಾಬ್ತಿನಡಿ ಹಣ ಮೀಸಲಿರಿಸಲಾಗುತ್ತದೆ. ಕೆಲವೊಂದು ನೂತನ ಯೋಜನೆಗಳಿಗೆ ಸೀಮಿತ ಅನುದಾನ ಇಡಲಾಗುತ್ತದೆಯಾದರೂ, ಫಂಡ್ ಇಲ್ಲದೆ ಘೋಷಣೆಯಾದ ಕಾರ್ಯಕ್ರಮಗಳು ಕ್ರಮೇಣ ನೇಪಥ್ಯಕ್ಕೆ ಸರಿಯುತ್ತದೆ.

ಇದರ ಹೊರತಾಗಿಯೂ ಅಧಿಕಾರದಲ್ಲಿರುವ ಪಕ್ಷಗಳು ಹಿಂದೆ ವರ್ಷಗಳಲ್ಲಿ ಅನ್ಯ ಪಕ್ಷಗಳು ಮಂಡಿಸಿದ್ದ ಕೆಲವೊಂದು ಕಾರ್ಯಕ್ರಮಗಳನ್ನು ಮುಂದುವರಿಸುವುದಿಲ್ಲ. ಇದರಿಂದ ಘೋಷಿತ ಯೋಜನೆಗಳಲ್ಲಿ ಕೆಲವೊಂದಕ್ಕೆ ಅನುದಾನ ಮೀಸಲಿಟ್ಟಿದ್ದರೂ, ಹೆಸರು ಬದಲಿಸಿ ಮುಂದುವರಿಸುವ ಪರಿಪಾಠ ಇದೆ. ಸದ್ಯ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ ಅಧಿಕಾರಿಗಳು ಸರ್ಕಾರದ ಸೂಚನೆ ಆಧರಿಸಿಯೇ ಕರ್ತವ್ಯ ನಿರ್ವಹಿಸುವುದರಿಂದ ಯೋಜನೆಗಳಲ್ಲಿ ಕಡಿತ ಮಾಡಲಾಗುತ್ತಿದೆ.

ಕಡತದಲ್ಲೇ ಉಳಿದಿರುವ ಯೋಜನೆಗಳು:

ಕಳೆದ ನಾಲ್ಕು ವರ್ಷದಿಂದ ಪಾಲಿಕೆಯಲ್ಲಿ ಆಡಳಿತಾಧಿಕಾರಿ ಅಧಿಕಾರ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಆಯಾ ವರ್ಷ ಆಯವ್ಯಯ ಮಂಡನೆಯಾಗಿದ್ದರೂ, ಅನುಷ್ಠಾನಕ್ಕೆ ಬಂದಿದ್ದು ಅತ್ಯಲ್ಪ. ಉದಾಹರಣೆಗೆ 2022-23ರ ಬಜೆಟ್‌ನಲ್ಲಿ 273 ಕೋಟಿ ರೂ. ವೆಚ್ಚದಲ್ಲಿ 108 ಕಿ.ಮೀ. ಉದ್ದ ಹೈ ಡೆನ್ಸಿಟಿ ಕಾರಿಡಾರ್ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಲಾಗಿತ್ತು. ಇದಾಗಿ 2 ವರ್ಷ ಕಳೆದರೂ, ಯೋಜನೆ ಕಾರ್ಯಗತಗೊಂಡಿಲ್ಲ. ಅಮೃತ ನಗರೋತ್ಥಾನ ಯೋಜನೆಯಲ್ಲಿದ್ದ ಬಹುತೇಕ ಕಾಮಗಾರಿಗಳು ಆರಂಭವಾಗಿಯೇ ಇಲ್ಲ. ಪ್ರವಾಹ ತಡೆಗೆ ರೂಪಿಸಿರುವ ಮಳೆಗಾಲುವೆಗಳ ಪುನರುಜ್ಜೀವನ ಕಾಮಗಾರಿ ವಿಶ್ವಬ್ಯಾಂಕ್ ನೆರವು ಸಿಗದ ಕಾರಣ ಕೆಲಸ ಆಮೆ ವೇಗ ಪಡೆದಿದೆ. ಹೊಸದಾಗಿ ಮೇಲ್ಸೇತುವೆ/ ಕೆಳಸೇತುವೆ, ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಟೆಂಡರ್ ಕೂಡ ಆಗಿಲ್ಲ. ಈ ರೀತಿ 3-4 ವರ್ಷ ಕಳೆದ ಬಳಿಕ ಇಂತಹವುಗಳಲ್ಲಿ ಕೆಲವೊಂದನ್ನು ಅನುದಾನ ಲಭ್ಯವಿಲ್ಲ ಎಂಬ ಕಾರಣ ಕೈಬಿಡಲಾಗುತ್ತಿದೆ.

2024-25ನೇ ಸಾಲಿನ ಬಜೆಟ್ ಮಂಡನೆಗೆ (2024ರ ಫೆ.29) ವರ್ಷ ತುಂಬಿದೆ. ಈ ಅವಧಿಯಲ್ಲಿ ಘೋಷಿತ ಕಾರ್ಯಕ್ರಮಗಳಲ್ಲಿ ಅರ್ಧಕ್ಕಿಂತ ಕಡಿಮೆ ಕಡತ ಬಿಟ್ಟು ಮುಂದಡಿ ಇಟ್ಟಿಲ್ಲ. ಅನುದಾನ ಅಲಭ್ಯ, ಕಾಮಗಾರಿಗಳ ಬಾಕಿ ಮೊತ್ತ ಪಾವತಿಸಲು ಸರ್ಕಾರದ ನಿಧಿ ಬಳಸಿದ್ದರಿಂದ ಕಾಮಗಾರಿಗಳಿಗೆ ಹಣದ ಕೊರತೆ ಎದುರಾಗಿದೆ. 1,580 ಕೋಟಿ ರೂ. ಮೊತ್ತದ ಬ್ರ್ಯಾಂಡ್ ಬೆಂಗಳೂರು ಯೋಜನೆಗಳಿಗೆ ಇದೇ ಸ್ಥಿತಿ ಉಂಟಾಗಿದೆ. ಸರ್ಕಾರದಿಂದ ಅನುಮೋದನೆಯಾಗಿದ್ದ 13,114 ಕೋಟಿ ರೂ. ಬಜೆಟ್‌ನಲ್ಲಿ ಈ ಆರ್ಥಿಕ ವರ್ಷದ ಕೊನೆಗೆ 10 ಸಾವಿರ ಕೋಟಿ ರೂ. (ಹಿಂದಿನ ಬಾಕಿ ಸೇರಿ) ಮೊತ್ತದಷ್ಟು ಮಾತ್ರ ಹಣ ಜಮೆ ಆಗುವುದೆಂದು ಅಂದಾಜಿಸಲಾಗಿದೆ. ಉಳಿದ ಹಣ ಕೊರತೆಯಾಗುವ ಅಥವಾ ಸಾಲದ ಮೂಲಕ ಸರಿದೂಗಿಸಿಕೊಳ್ಳುವ ಕಸರತ್ತು ನಡೆಸಬೇಕಾಗುತ್ತದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಹಿಂದಿನಿಂದಲೂ ಪಾಲಿಕೆಯಲ್ಲಿ ಆಯಾ ವರ್ಷ ಘೋಷಿಸುವ ಯೋಜನೆಗಳಲ್ಲಿ ಎಲ್ಲವೂ ಜಾರಿಗೆ ಬರುವುದಿಲ್ಲ. ಕೆಲವೊಂದನ್ನು ಕ್ಯಾರಿ ಓವರ್ ರೀತಿ ಮುಂಬರುವ ವರ್ಷಗಳಿಗೆ ಮುಂದೂಡಲಾಗುತ್ತದೆ. ಪ್ರಮುಖ ಕಾರ್ಯಕ್ರಮ ಕೈಗೆತ್ತಿಕೊಳ್ಳುವುದಿದ್ದರೂ, ಅನುಷ್ಠಾನದಲ್ಲಿ ಇನ್ನಷ್ಟು ಪಾರದರ್ಶಕತೆ ಬರಬೇಕಿದೆ.

- ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್

ಪ್ರಸ್ತುತ ಆಡಳಿತಾಧಿಕಾರಿಗಳ ಅವಧಿಯಲ್ಲಿ ಶಾಸ ಮಾತ್ರ ಬಜೆಟ್ ಮಂಡಿಸಲಾಗುತ್ತಿದೆ. ಇದರಿಂದ ನಗರದ ಜನರಿಗೆ ಯಾವ ಅನುಕುಲವೂ ಆಗುತ್ತಿಲ್ಲ. ನಾಗರಿಕರ ತೆರಿಗೆ ಹಣಕ್ಕೆ ಲೆಕ್ಕ ಕೊಡಬೇಕಿರುವ ಕಾರಣ ಆಯವ್ಯಯ ಘೋಷಿಸಿದ ಬಳಿಕ ಜಾರಿಯಲ್ಲೂ ಉತ್ತರದಾಯಿತ್ವ ಹೊಂದುವ ವ್ಯವಸ್ಥೆ ಅಗತ್ಯ.

- ಅಶ್ವತ್ಥನಾರಾಯಣಗೌಡ, ಆಡಳಿತ ಪಕ್ಷದ ಮಾಜಿ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net