

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ ಹಲವು ದಶಕಗಳಿಂದ ನಗರದ ಸಾಂಸ್ಕೃತಿಕ ಬದುಕಿನ ಭಾಗವಾಗಿರುವ ಸರಸ್ವತಿ ಸಂಗೀತ ವಿದ್ಯಾಲಯ, ತನ್ನ ವಾರ್ಷಿಕ ಚಟುವಟಿಕೆಗಳ ಭಾಗವಾಗಿ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ "ವಾದ್ಯ ನಿನಾದ' ಕಾರ್ಯಕ್ರಮ ಸಂಗೀತಾಸಕ್ತರ ಮನ ಮುದಗೊಳಿಸಿತು.
ಆರಂಭದಲ್ಲಿ ಬೆಂಗಳೂರಿನ ಯುವ ಪ್ರತಿಭಾವಂತ ಸಂತೂರ ವಾದಕಿ ಸುಮಾ ಹೆಗಡೆ ಅವರಿಂದ ಸಂತೂರ ವಾದನ ನಡೆಯಿತು. ರಾಗ ಯಮನ ನುಡಿಸಿ ಸಂಗೀತಾಸಕ್ತರ ಮನಸ್ಸನ್ನು ಸಂತೋಷಗೊಳಿಸಿದರು.
ನಂತರ ಪುಣೆಯ ಗಾಯಕಿ ಸಾನಿಯಾ ಪಾಠಣಕರ ಅತ್ಯಂತ ಸುಶ್ರಾವ್ಯವಾಗಿ ರಾಗ ಕಲಾವತಿಯೊಂದಿಗೆ ಕಾರ್ಯಕ್ರಮ ಆರಂಭಿಸಿ, ಮರಾಠಿ ಅಭಂಗ ಪ್ರಸ್ತುತಪಡಿಸಿದರು. ಸಾನಿಯಾ ಅವರ ಪ್ರಬುದ್ಧ ಹಿಂದೂಸ್ತಾನಿ ಹಾಡುಗಾರಿಕೆಯಿಂದ ಸೇರಿದ್ದ ಅಪಾರ ಸಂಖ್ಯೆಯ ಸಂಗೀತಾಸಕ್ತರ ಮನಸ್ಸನ್ನು ಮುದಗೊಳಿಸಿದರು. ಶ್ರೀಧರ ಮಾಂಡ್ರೆ ತಬಲಾ ಮತ್ತು ಹಾಮೋರ್ನಿಯಂನಲ್ಲಿ ಬಸವರಾಜ ಹಿರೇಮಠ ಸಾಥ್ ನೀಡಿದರು.
ಸಂಸ್ಥೆ ಅಧ್ಯಕ್ಷ ಉದಯ ದೇಸಾಯಿ, ಕಾರ್ಯದರ್ಶಿ ರಾಧಾ ದೇಸಾಯಿ, ಪಂ.ಕೈವಲ್ಯಕುಮಾರ ಗುರುವ, ಪಂ. ರುನಾಥ ನಾಕೋಡ, ವಿದುಷಿ ರೇಣುಕಾ ನಾಕೋಡ, ರವಿ ಕುಲಕರ್ಣಿ, ಇತರರು ಇದ್ದರು.