ಮನರಂಜಿಸಿದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ

mosaru kudike
Published on

ಮಡಿಕೇರಿ: ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಸ್ಪರ್ಧೆ ಹಾಗೂ ಮಕ್ಕಳ ಛದ್ಮವೇಷ ಸಂಭ್ರಮದಿಂದ ಇತ್ತೀಚೆಗೆ ನಡೆಯಿತು.


ಗೌಳಿ ಸಮುದಾಯದವರು ಅನಾದಿ ಕಾಲದಿಂದಲೂ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿರುವಂತೆ ಶ್ರೀ ಕೃಷ್ಣ ಜಯಂತಿಯನ್ನು ಈ ವರ್ಷವೂ ದೇವಾಲಯ ಸಮಿತಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮೊಸರು ಕುಡಿಕೆ ಒಡೆಯುವ ಸ್ಪರ್ಧಿಗಳಾಗಿ ಸಂತೋಷ್ ಬಲರಾಮ್ ಹಾಗೂ ಮಹೇಶ್ ರಾಮು ಭಾಗವಹಿಸಿದರು.


ಸ್ಪರ್ಧೆಗೂ ಮುನ್ನ ದೇವಾಲಯದಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ, ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ನಂತರ ಇಬ್ಬರು ಯುವಕರು ಮೊಸರು ಕುಡಿಕೆ ಒಡೆಯಲು ಮುಂದಾದರು. ಯುವಕರು ನೀರಿನೇಟನ್ನು ಲೆಕ್ಕಿಸದೆ ವಾದ್ಯಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಮೊಸರು ಕುಡಿಕೆ ಓಡೆಯುವಲ್ಲಿ ಯಶಸ್ವಿಯಾದರು.ವಿಜೇತರಾದ ಸ್ಪರ್ಧಿಗಳಿಗೆ ದೇವಾಲಯದಲ್ಲಿ ಸಾಂಪ್ರದಾಯಕ ಬಹುಮಾನ ನೀಡಿ ಗೌರವಿಸಲಾಯಿತು.


ಛದ್ಮವೇಷ ಸ್ಪರ್ಧೆ: ಮೊಸರು ಕುಡಿಕೆ ಸ್ಪರ್ಧೆಯ ನಂತರ ಮಕ್ಕಳಿಗೆ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ, ರಾಧೆಯರ ಛದ್ಮವೇಷ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಜಿಲ್ಲೆಯ ವಿವಿಧೆಡೆಯಿಂದ ಬಂದ ಶ್ರೀ ಕೃಷ್ಣ ವೇಷಧಾರಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಆಯುಷ್.ಎಸ್ ರೈ, ದ್ವಿತೀಯ ಬ್ರಿಯಾ ಹಾಗೂ ಜಿ.ಎಂ.ಮನ್ವಿತ್ ತೃತೀಯ ಬಹುಮಾನವನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net