

ಯಲ್ಲಾಪುರ: ಯಕ್ಷ ಚಿಗುರು ಸಂಘಟನೆ ಆಶ್ರಯದಲ್ಲಿ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶನಿವಾರ ಜರುಗಿದ ವರ್ಷಧಾರೆಯ ಯಕ್ಷ ಸಿಂಚನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿಘ್ನೕಶ್ವರ ಕುಂಟೆಮನೆ, ಮಹಾಬಲೇಶ್ವರ ಭಟ್ಟ ಬೆಳಶೇರ, ಶಶಾಂಕ ಬೋಡೆ, ಮಂಜುನಾಥ ಭಟ್ಟ ದೇವದಮನೆ, ಮದ್ದಲೆವಾದಕರಾಗಿ ಗಣಪತಿ ಹೆಗಡೆ ಕಣ್ಣಿಜಡ್ಡಿ, ರಾಘವೇಂದ್ರ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಶಾಂತ ಕೈಗಡಿ, ಪ್ರಸನ್ನ ಡಬ್ಗುಳಿ ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ನಾಗರಾಜ ಭಟ್ಟ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಲಿ, ದೀಪಕ ಭಟ್ಟ ಕುಂಕಿ, ಶ್ರೀಧರ ಅಣಲಗಾರ, ಆದಿತ್ಯಾ ಕವಡಿಕೆರೆ, ಅಂಕಿತಾ ಕವಡಿಕೆರೆ ಪಾತ್ರ ನಿರ್ವಹಿಸಿದರು. ಗೋಪಾಲ ವೇಷ, ಪೀಠಿಕೆ ಸ್ತ್ರೀವೇಷ ಕಂಸಜನ್ಮ ಪ್ರಸಂಗದ ಉಗ್ರಸೇನ-ರಚಿಮತಿಯ ಸನ್ನಿವೇಶ, ಮೀನಾಕ್ಷಿ ಕಲ್ಯಾಣ ಪ್ರಸಂಗದ ಮೀನಾಕ್ಷಿ-ಈಶ್ವರರ ಯುದ್ಧದ ಸನ್ನಿವೇಶ, ಚಕ್ರವ್ಯೂಹ ಪ್ರಸಂಗದ ಅಭಿಮನ್ಯು-ಸುಭದ್ರೆಯ ಸನ್ನಿವೇಶ ಹಾಗೂ ಕಂಸ ವಧೆ ಪ್ರಸಂಗದ ಕೃಷ್ಣ-ಅಕ್ರೂರರ ಸನ್ನಿವೇಶಗಳನ್ನು ಕಲಾವಿದರು ಅಭಿನಯಿಸಿದರು. ಭಾಗವತರು ಗಾನವೈಭವದ ಮೂಲಕ ರಂಜಿಸಿದರು. ಸಂಘಟಕ ಸುಬ್ಬಣ್ಣ ಕಂಚಗಲ್ ಕಾರ್ಯಕ್ರಮ ನಿರ್ವಹಿಸಿದರು.