

ಕಡೂರು: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವನ್ನಿಯಕುಲಕ್ಷತ್ರಿಯ ಸಮಾಜದ ಬಂಧುಗಳು ಜಾತಿ ಕಾಲಂನಲ್ಲಿ ವನ್ನಿಯಕುಲ ಎಂದು ಕಡ್ಡಾಯವಾಗಿ ಬರೆಸಬೇಕು ಎಂದು ವನ್ನಿಯ ಕ್ಷತ್ರಿಯ ಸಂಘದ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಗೌಂಡರ್ ತಿಳಿಸಿದರು.
ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಮುದಾಯದಲ್ಲಿ ವನ್ನಿಯಕುಲ ಕ್ಷತ್ರಿಯ ಪ್ರಮುಖ ಜಾತಿಯಾಗಿದ್ದು, ಇದರ ಅಡಿಯಲ್ಲಿ 30ಕ್ಕೂ ಹೆಚ್ಚು ಉಪಪಂಗಡಗಳಿದ್ದು, ಧರ್ಮದ ಕಾಲಂನಲ್ಲಿ ಹಿಂದು ಎಂದು ನಮೂದಿಸಬೇಕಿದೆ. ಈಗಾಗಲೇ ರಾಜ್ಯದ ಬೆಂಗಳೂರು, ಕೋಲಾರದ ಬೆರಳಣಿಕೆಯಷ್ಟು ಭಾಗಗಳಲ್ಲಿ ತಿಗಳ ಸಮುದಾಯವಿದ್ದು, ವನ್ನಿಯಕುಲ ಕ್ಷತ್ರಿಯ ಸಮುದಾಯಕ್ಕೂ ತಿಗಳರಿಗೂ ಯಾವುದೇ ಸಂಬಂಧವಿಲ್ಲ. ಜಾತಿ ಹೆಸರಿನಡಿ ತಿಗಳರು ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಮುಖ ಜಾತಿಯೇ ವನ್ನಿಯ ಕುಲ ಕ್ಷತ್ರಿಯ ಸಮಾಜ ಎಂಬುದನ್ನು ಪರಿಗಣಿಸಬೇಕಿದೆ
ರಾಜ್ಯದ್ಯಾಂತ 30ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ವನ್ನಿಯಕುಲ ಕ್ಷತ್ರಿಯ ಸಮಾಜ ಹೊಂದಿದೆ. ತಿಗಳರು ವನ್ನಿಯ ಕುಲ ಕ್ಷತ್ರಿಯದವರು ಎಂದು ಸಂಚು ರೂಪಿಸಿ ವಹ್ನಿಕುಲ ಎಂದು ಹೊಸ ಜಾತಿ ಸೃಷ್ಟಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವನ್ನಿಯಕುಲ ಸಮಾಜದ ಬಂಧುಗಳು ಜಾಗೃತಗೊಳ್ಳಬೇಕಿದೆ. ಸಮೀಕ್ಷೆಗೆ ಬರುವ ಗಣತಿದಾರರಿಗೆ ವನ್ನಿಯಕುಲ ಎಂದು ಸರಿಯಾದ ಮಾಹಿತಿ ನೀಡಿ ನಮೂದಿಸಬೇಕು ಎಂದು ಮನವಿ ಮಾಡಿದರು.
ವನ್ನಿಯಕುಲ ಸಮಾಜದ ತಾಲೂಕು ಅಧ್ಯಕ್ಷ ಕೆ.ಎಂ.ಮಂಜುನಾಥ್, ರಾಜ್ಯ ಕಾರ್ಯದರ್ಶಿ ರವಿಶಂಕರ್, ತಾಲೂಕು ಉಪಾಧ್ಯಕ್ಷ ಎಂ. ರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್, ಗೌರವಾಧ್ಯಕ್ಷ ಟಿ.ಕೆ.ಮಂಜುನಾಥ್, ಬಾಲು, ಸುಬ್ರಹ್ಮಣ್ಯ, ಶಿವುಕುಮಾರ್ ಮತ್ತಿತರಿದ್ದರು.