

ಗದಗ ಮಕ್ಕಳಿಗೆ ಶಿಕ್ಷಣ ಹಾಗೂ ರಕ್ಷಣೆ ನೀಡುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಆರ್‌ಟಿಇ, ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ತವ್ಯಲೋಪದಿಂದ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಶಾಲೆಯ ಹಾಜರಾತಿ ಪರಿಶೀಲಿಸಿ ಶಾಲೆಯಿಂದ ಮಗು ಹೊರಗುಳಿದರೆ ಹಾಜರಾತಿ ಪ್ರಾಧಿಕಾರಕ್ಕೆ ತಿಳಿಸಬೇಕು. ಮಗುವಿನ ಕೌಟುಂಬಿಕೆ ಹಿನ್ನೆಲೆ ವಿಚಾರಿಸಬೇಕು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಮಗು ಶಾಲೆಯಿಂದ ದೀರ್ಘಕಾಲದವರೆಗೆ ಹೊರಗುಳಿದ ಸಂದರ್ಭದಲ್ಲಿ ಬಾಲಕಾರ್ಮಿಕ, ಅನೈತಿಕ ಚಟುವಟಿಕೆ, ಬಾಲ್ಯ ವಿವಾಹ ಮುಂತಾದ ಘಟನೆಗಳು ಸಂಭವಿಸಬಹುದಾಗಿವೆ. 2016ರ ಮಕ್ಕಳ ರಕ್ಷಣಾ ನೀತಿ ಪಾಲಿಸುವುದು ಕಡ್ಡಾಯವಾಗಿದೆ. ಶಾಲಾ ಫಲಕದಲ್ಲಿ ಮಕ್ಕಳ ಸಹಾಯವಾಣಿ ಅಳವಡಿಸುವುದು, ಶಾಲೆಯಲ್ಲಿ ಮಕ್ಕಳ ಸಲಹಾಪೆಟ್ಟಿಗೆ ಇಡುವುದರಿಂದ ಮಕ್ಕಳ ರಕ್ಷಣಾ ನೀತಿ ಅನುಸರಿಸಿ ಶಾಲೆಯಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಬಹುದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ. ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳು ಕಂಡುಬಂದಿರುವುದು ಆತಂಕಕಾರಿ ವಿಷಯ. ಮಕ್ಕಳು ಶಾಲೆಗೆ ಅನಧಿಕೃತ ಗೈರು ಆಗದಿರುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಅವರ ಭವಿಷ್ಯ ಉಜ್ವಲಗೊಳಿಸಬಹುದಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯ ಪಾಲನೆಯಾಗಬೇಕು. ಶಾಲೆಗೆ ಹಾಜರಾದ ಮಗು ಅರ್ಥಪೂರ್ಣ ಕಲಿಕಾ ಅವಧಿ ಪೂರ್ಣಗೊಳಿಸಬೇಕು. ಶಾಲೆಗೆ ಮಕ್ಕಳನ್ನು ಕಡ್ಡಾಯವಾಗಿ ಕಳುಹಿಸುವುದು ಪಾಲಕರ ಜವಾಬ್ದಾರಿಯೂ ಕೂಡ ಆಗಿದೆ. ಶಾಲೆಯಲ್ಲಿ ಮಗುವಿಗೆ ಕಲಿಕಾ ಅವಧಿಯಲ್ಲಿ ಸಂತಸದಾಯಕ ವಾತಾವರಣ ನಿರ್ಮಾಣವಾಗಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ಮಟ್ಟಹಾಕಲು ವಿವಿಧ ಇಲಾಖೆಗಳು ಕ್ರಮ ಜರುಗಿಸಬೇಕಾಗಿದೆ ಎಂದರು.
ಮಕ್ಕಳ ಸಹಾಯವಾಣಿ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಬಿ.ಎನ್. ಸಂಶಿ ಅವರು ಶಾಲೆಯಲ್ಲಿದೆ ಶಿಕ್ಷಣದ ಜತೆ ರಕ್ಷಣೆ ಎಂಬ ಶೀರ್ಷಿಕೆಯಡಿ ಆರ್‌ಟಿಇ, ಫೋಕ್ಸೋ, ಬಾಲ್ಯ ವಿವಾಹ ನಿಷೇಧ ಕುರಿತು ಮಾತನಾಡಿದರು. ಜ್ಯೋತಿ ಅವರು ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಮಾತನಾಡಿದರು. ಡಿವೈಎಸ್‌ಪಿ ಇನಾಮದಾರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯಶ್ರೀ ಕವಲೂರ, ಸದಸ್ಯ ಡಿ.ಐ. ಈರಗಾರ ಇತರರಿದ್ದರು.