

ಮುಧೋಳ: ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಸೇವೆಗೆ ರಾಜಕೀಯ ಪ್ರವೇಶ ಮಾಡಬೇಕೆ ಹೊರತು ಕೇವಲ ಆರೋಪ ಪ್ರತ್ಯಾರೋಪದ ರಾಜಕಾರಣ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ರನ್ನ ಕ್ರೀಡಾಂಗಣದಲ್ಲಿ ನಿರ್ಮಿತ ಕೇಂದ್ರದಿಂದ ಪುರುಷ ಹಾಗೂ ಮಹಿಳೆಯರ ಮಲ್ಟಿ ಜಿಮ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆಲವರು ಅಭಿವೃದ್ಧಿ ಕಾರ್ಯ ಗಳಾಗಿಲ್ಲ ಎಂದು ಸುಳ್ಳು ಆರೋಪ ಮಾಡುವುದರಲ್ಲಿ ತೊಡಗಿದ್ದಾರೆ. ಆದರೆ, ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅದನ್ನು ಅರಿತು ಅವರು ಮಾತನಾಡಬೇಕು ಎಂದರು.
ರನ್ನ ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗಿದೆ. ಮಳೆಗಾಲದಿಂದ ವಾಕಿಂಗ್ ಟ್ಯಾಕ್ ವಿಳಂಬವಾಗಿದೆ. ಬ್ಯಾಡ್ಮಿಂಟನ್ ಹಾಲ್ ಕಾಮಗಾರಿ ಪೂರ್ಣ ಗೊಳಿಸಲಾಗುತ್ತಿದೆ. ಸ್ವಿಮಿಂಗ್ ಪೂಲ್, ಯುವಕರಿಗೆ ರನ್ನಿಂಗ್ ಟ್ರ್ಯಾಕ್ ನಿರ್ಮಿಸಲಾಗುವುದು. ಲೋಕಾಪೂರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾತಿ ಪಡೆಯಲಾಗಿದೆ. ಲೋಕಾಪೂರ ಪಟ್ಟಣದಲ್ಲಿ 5 ಎಕರೆ ಯಲ್ಲಿ ಕ್ರೀಡಾಂಗಣ ನಿರ್ಮಿಸಲಾಗುವುದು. ಲೋಕಾಪೂರದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಶೀಘ್ರ ಚಾಲನೆ ನೀಡಲಾಗುವುದು. ದತ್ತ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಹೈಟೆಕ್ ಶೌಚಾಲಯ ಮಾಡಲಾಗುತ್ತಿದೆ. ಬೈಪಾಸ್ ರಸ್ತೆ ಶೀಘ್ರ ಲೋಕಾರ್ಪಣೆ ನಡೆಸಲಾಗುವುದು ಎಂದರು.
ಡಾ.ಕೆ.ಎಲ್.ಉದಪುಡಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಅಶೋಕ ಕಿವಡಿ, ಸದುಗೌಡ ಪಾಟೀಲ, ಸಂಗಪ್ಪ ಇಮ್ಮನ್ನವರ, ಉದಯಸಿಂಗ್ ಪಡತಾರೆ, ಡಾ.ವಿ.ಎನ್.ನಾಯಿಕ, ಡಾ. ಕಲ್ಯಾಣ ಕುಮಾರ ಮಸಳಿ, ವೆಂಕಣ್ಣ ಅಂಕಲಗಿ, ಸಂತೋಷ ಪಾಲೋಜಿ, ತಾಪಂ ಇಒ ಮಲ್ಲಿಕಾರ್ಜುನ ಅಂಬಿಗೇರ, ಜಿ.ಸಿ.ಡೂಗನ್ನವರ, ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರಲಿಂಗ ಗೂಗಿ, ನಬಿ ಜಹಾಗೀರ ದಾರ, ಆರುಣ ಕುಮಕಾಳೆ ಇತರರು ಇದ್ದರು.