

ಎಚ್.ಡಿ.ಕೋಟೆ: ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆಯ ಜಾತಿ ಕಾಲಂನಲ್ಲಿ ನಾಯಕ ಎಂದು ನಮೂದಿಸಿ ಎಂದು ನಾಯಕ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ ದೊಡ್ಡನಾಯಕ ಮನವಿ ಮಾಡಿದರು.
ನಾಯಕ ಸಮುದಾಯದವರು ಜಾತಿ ಕಾಲಂನ ಕ್ರಮ ಸಂಖ್ಯೆ 9 ಮತ್ರು ಕೋಡ್ ನಂ.38/2 ರಲ್ಲಿ ಜಾತಿಯ ಹೆಸರನ್ನು ನಾಯಕ ಎಂದು ನಮೂದಿಸಬೇಕು ಎಂದು ಮಂಗಳವಾರ ಮಾಹಿತಿ ನೀಡಿದರು.
ಕೋಟೆ ತಾಲೂಕಿನಲ್ಲಿ ಇಪ್ಪತ್ತು ಸಾವಿರ ಕುಟುಂಬಗಳಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಹುನ್ನಾರ ನಡೆಯುತ್ತಿದ್ದು, ಅದು ನಡೆಯಕೂಡದು. ನಾಯಕ ಸಮಾಜಕ್ಕೆ ಎಸ್ಟಿ ಮೀಸಲಿನಿಂದ ಕಡಿಮೆ ಪ್ರಮಾಣದ ಮೀಸಲಾತಿ ಇದೆ. ಹೀಗಿರುವಾಗ ಕುರುಬ ಸಮಾಜವನ್ನು ನಮ್ಮಲ್ಲಿಗೆ ಸೇರಿಸಿದರೆ ನಮಗೆ ಮೀಸಲು ಹಂಚಿಕೆ ವಿಧಾನದಲ್ಲಿ ಅನ್ಯಾಯ ಎಸಗಿದಂತಾಗುತ್ತದೆ ಎಂದು ಮುಖಂಡ ಜಿನ್ನಹಳ್ಳಿ ರಾಜನಾಯಕ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ನಾಯಕ ಸಮಾಜದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲ ಇತ್ತು. ಮುಂದಿನ ದಿನಗಳಲ್ಲಿ ಈ ಹಿಂದಿನ ಅಧ್ಯಕ್ಷ ಎಂ.ಸಿ. ದೊಡ್ಡನಾಯಕ ಮುಂದುವರಿಯಲಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ತಾಲೂಕು ಮಟ್ಟದ ಸಭೆ ಸೇರಿ ಘೋಷಣೆ ಮಾಡಲಾಗುವುದು ಎಂದರು.
ಸಂಘದ ಉಪಾಧ್ಯಕ್ಷರಾದ ಮಿಲ್ ನಾಗರಾಜು, ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೃಷ್ಣ, ಕಾರ್ಯದರ್ಶಿ ಜಿಯಾರ ನಾಗನಾಯಕ, ಗೌರವಾಧ್ಯಕ್ಷ ಮರಿತಿಮ್ಮನಾಯಕ, ಖಜಾಂಚಿ ಅಂಕನಾಯಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.