

ಮಡಿಕೇರಿ: ರಾಜ್ಯ ಸರಕಾರದ ವತಿಯಿಂದ ಸೆ.೨೨ ರಿಂದ ಅ.೭ರ ವರೆಗೆ ನಡೆಯುತ್ತಿರುವ ಜಾತಿವಾರು ಗಣತಿಯ ಸಂದರ್ಭ ಜಾತಿ, ಭಾಷೆ ಮತ್ತು ಧರ್ಮದ ಕಾಲಂನಲ್ಲಿ ಕೊಡವ ಎಂದೇ ಬರೆಸುವ ಮೂಲಕ ಆ್ಯನಿಮಿಸ್ಟಿಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕೆ ಕೊಡವರು ಕಟಿಬದ್ಧರಾಗಿರಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರೆ ನೀಡಿದರು.
ಸಿಎನ್‌ಸಿ ಸಂಘಟನೆ ವತಿಯಿಂದ ಬೇಂಗ್ ನಾಡಿನ ಚೇರಂಬಾಣೆಯಲ್ಲಿ ನಡೆದ ೧೪ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಿಂದೂ ಧರ್ಮದ ಬಗ್ಗೆ ವಿಶ್ಲೇಷಿಸಿ ಹಿಂದೂ ಎನ್ನುವುದು ಒಂದು ಧರ್ಮವಲ್ಲ. ಅದೊಂದು ಜೀವನ ಶೈಲಿ ಎಂದು ಬಹಳ ಸೊಗಸಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಈ ಸಂಬಂಧ ಹಿಂದೂ ಒಂದು ಧರ್ಮವಲ್ಲ, ಅದೊಂದು ಜೀವನ ಶೈಲಿ ಎಂದು ಹೊರಡಿಸಿದ ತೀರ್ಪನ್ನು ಕೂಡ ಮೋದಿಯವರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯತೆ, ಇಂಡಿಯನ್ ನ್ಯಾಷನಲಿಸಂ ಮತ್ತು ಧರ್ಮವನ್ನು ಒಂದೇ ಸಂಕೋಲೆಯಲ್ಲಿ ಕಟ್ಟಬಾರದು ಎಂದರು.
ಕೊಡವರ ವೈಶಿಷ್ಟ್ಯ ಅವರಿಗಿರುವ ಆ್ಯನಿಮಿಷ್ಟಿಕ್ ಧಾರ್ಮಿಕ ಹಿನ್ನೆಲೆಯನ್ನು ಭಾಷೆ, ಜಾತಿ ಕಾಲಂನಲ್ಲಿ ಕೊಡವ ಎಂದು ದಾಖಲಿಸಿ, ರಾಜ್ಯಾಂಗ ಖಾರ್ತಿ ಪಡೆದಲ್ಲಿ ಮಾತ್ರ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ವಿಶೇಷ ಹಕ್ಕು ಸಂವಿಧಾನದ ೨೫ ಮತ್ತು ೨೬ರ ಧಾರ್ಮಿಕ ಸ್ವಾತಂತ್ರ್ಯದಡಿ ಶಾಶ್ವತ ಮುಂದುವರೆಯಲು ಸಾಧ್ಯ. ಸಾಗರದಂತಿರುವ ಬಹು ಸಂಖ್ಯಾತ ಸಮುದಾಯದ ಮಧ್ಯೆ ಗುರುತಿಸಿ ಮುಳುಗಿ ವಿಶೇಷತೆ ಕಳೆದುಕೊಂಡು ಎಲ್ಲರಂತೆ ಆಗಿ ಹೋದಲ್ಲಿ ೨೦೨೯ರ ಶಸ್ತ್ರಾಸ್ತ್ರ ಕಾಯ್ದೆ ತಿದ್ದುಪಡಿಯ ಸಂದರ್ಭ ಕೊಡವರ ಈ ವಿಶೇಷ ಹಕ್ಕು ಕಳೆದುಕೊಳ್ಳುವುದು ಶತ ಸಿದ್ಧ. ಕೊಡವರು ಪ್ರತ್ಯೇಕ ಎಂದು ದಾಖಲಿಸಲ್ಪಟ್ಟಿದೆ. ಕೊಡವ ಲ್ಯಾಂಡ್ ಸೆಲ್ಫ್‌ರೂಲ್, ಎಸ್.ಟಿ.ವರ್ಗೀಕರಣ ಮತ್ತು ಪಾರ್ಲಿಮೆಂಟ್ ಎಸೆಂಬ್ಲಿಯಲ್ಲಿ ಸಿಕ್ಕಿಂನ ಸಂಘ ಮತಕ್ಷೇತ್ರದಂತೆ ಪ್ರತ್ಯೇಕ ಕೊಡವ ಮತ ಕ್ಷೇತ್ರವನ್ನು ಪಡೆಯಬಹುದು ಎಂದರು.
ಕೊಡವ ಎಂದು ನಮೂದಿಸಿ: ಜಾತಿ ಜನಗಣತಿಯಲ್ಲಿ ಉತ್ತಮ ನಾಳೆಗಾಗಿ ಮತ್ತು ಅತ್ಯಂತ ನಗಣ್ಯ ಆ್ಯನಿಮಿಸ್ಟೆಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಜಾತಿ-ಭಾಷೆ, ಭಾಷೆ, ಧರ್ಮದ ಕಾಲಂನಲ್ಲಿ ಕೊಡವ ಎಂದೇ ನಮೂದಿಸಬೇಕು. ಕೊಡವರು ಯಾವುದೇ ಪಂಥಗಳು ಅಥವಾ ಉಪಪಂಗಡಗಳಿಲ್ಲದ ಏಕೈಕ, ಏಕ-ಜನಾಂಗೀಯ ಗುಂಪಾಗಿದ್ದು, ವಿಶಿಷ್ಟ ಗುರುತು, ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ವಿಭಿನ್ನ ಸಮುದಾಯದವರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಂದಪಂಡ ರಚನ ಮನೋಜ್, ಕಲ್ಮಾಡಂಡ ದೇಚಮ್ಮ ಮೇದಪ್ಪ, ಮಂದಪಂಡ ಹರಿಣಿ ಅಯ್ಯಣ್ಣ, ಕಲ್ಮಾಡಂಡ ದಮಯಂತಿ ಮೊಣ್ಣಪ್ಪ, ಮಂದಪಂಡ ನಿಹಾಲಿ ದೇಚಕ್ಕ, ಪಟ್ಟಮಾಡ ಸೀತಮ್ಮ, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಬೊಳರ್ಪಂಡ ಚೆಂಗಪ್ಪ, ನಾಪಂಡ ಗಣೇಶ್ ಇತರರು ಭಾಗವಹಿಸಿದ್ದರು.