

ಹುಬ್ಬಳ್ಳಿ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಬ್ರಾಹ್ಮಣ (218) ಮಾತ್ರ ನಮೂದಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಲಕ್ಷ್ಮಣ ಸಿ. ಕುಲಕರ್ಣಿ ವಿನಂತಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮಿತಿ ಕೈಪಿಡಿಯ ಅನುಬಂಧ 3ಎನಲ್ಲಿ ಧರ್ಮ, ಜಾತಿ, ಉಪಜಾತಿ ಪಟ್ಟಿ ಸಿದ್ಧಪಡಿಸಲಾಗಿದೆ. ಇದು ಅವೈಜ್ಞಾನಿಕವಾಗಿದೆ. ಯಾವುದೇ ಆಧಾರ ರಹಿತ ಪಟ್ಟಿಯೂ ಇದಾಗಿದೆ. ಜಾತಿ ಗಣತಿಯಲ್ಲಿ ಬ್ರಾಹ್ಮಣರಲ್ಲಿ ಸುಮಾರು 60 ಉಪಪಂಗಡಗಳನ್ನು ಸೇರಿಸಲಾಗಿದೆ. ಇದರಲ್ಲಿ ಕ್ರಿಶ್ಚಿಯನ ಬ್ರಾಹ್ಮಣ, ಮುಸ್ಲಿಂ ಬ್ರಾಹ್ಮಣ ಹೀಗೆ ಅವೈಜ್ಞಾನಿಕ ಪಟ್ಟಿ ಇದೆ. ಹಿಂದು ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ದುರುದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಬ್ರಾಹ್ಮಣ ಜಾತಿಯಲ್ಲಿಯ ಉಪ ಜಾತಿಗಳನ್ನು ಬೇರೆ ಬೇರೆಯಾಗಿ ವರ್ಗೀಕರಿಸಿ ಪ್ರತಿಯೊಂದು ಉಪಜಾತಿಗೆ ಪ್ರತ್ಯೇಕ ಕೋಡ್ ಕೊಡಲಾಗಿದೆ. ಹೀಗೆ ಪ್ರತ್ಯೇಕಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದ್ದಾರೆ.
ಇ-ಆಡಳಿತ ಇಲಾಖೆ ಮೂಲಕ ಸಮೀಕ್ಷೆ ನಡೆಸಲು ಸೂಚನೆ ಇದ್ದರೂ ಹಿಂದುಳಿದ ವರ್ಗಗಳ ಆಯೋಗ ಡಿಜಿಟಲ್ ವಿಧಾನದಲ್ಲಿ ಸಮೀಕ್ಷೆ ಮಾಡಲು ತಂತ್ರಾಂಶ ಅಭಿವೃದ್ಧಿಪಡಿಸಿಲ್ಲ. ಸೂಕ್ತ ಸಿಬ್ಬಂದಿ ಹೊಂದಿಲ್ಲ. ಆದರೂ ಬ್ರಾಹ್ಮಣ ಸಮಾಜದವರು ತಮ್ಮ ಉಪಪಂಗಡ ಮರೆತು ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ಹಾಗಾಗಿ ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಬ್ರಾಹ್ಮಣ ಮಾತ್ರ ದಾಖಲಿಸಬೇಕು. ಉಪ ಜಾತಿಗಳನ್ನು ನಮೂದಿಸಬಾರದು ಎಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.