

ಕಡೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ದತ್ತಾಂಶ ಸಮೀಕ್ಷೆ ನಡೆಸುತ್ತಿದ್ದು ಜಿಲ್ಲೆಯ ಹಾಗೂ ತಾಲೂಕು ಭೋವಿ ಸಮಾಜವು ಭೋವಿ ವಡ್ಡರು ಎಂದು ಬರೆಯಿಸಬೇಕು ಎಂದು ಭೋವಿ ಸಮಾಜದ ರಾಜ್ಯ ಕಾರ್ಯದರ್ಶಿ ದಿಲೀಪ್ ಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಜನಗಣತಿ ಆರಂಭವಾಗಿದ್ದು, ನಿಮ್ಮ ಮನೆಗಳಿಗೆ ಬರುವ ಗಣತಿದಾರರಿಗೆ ಸಮುದಾಯದವರು ಜಾತಿ ಬರೆಸುವಾಗ ಭೋವಿ ಎಂದು, ಉಪಜಾತಿ ವಡ್ಡರು ಎಂದು, ಕುಲ ಕಸುಬು ಕಲ್ಲು ಹೊಡೆಯುವುದು, ಮಣ್ಣಿನ ಕೆಲಸ ಎಂದು ಬರೆಸಬೇಕು ಇದನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಕೊಲ್ಲಾಭೋವಿ ಮಾತನಾಡಿ, ಒಳ ಮೀಸಲಾತಿ ಸಮೀಕ್ಷೆ ನಡೆಯುತ್ತಿದ್ದು , ನಮ್ಮ ಜನಾಂಗದವರು ಗ್ರಾಮಗಳನ್ನು ತೊರೆದು ಕಾಫಿ ತೋಟ ಮತ್ತಿತರ ಭಾಗಗಳಿಗೆ ಕೂಲಿಗಾಗಿ ಹೋಗಿದ್ದಾರೆ ಅವರನ್ನು ಕೂಡಲೇ ಕರೆಯಿಸಿಕೊಂಡು ಮಾಹಿತಿ ನೀಡಬೇಕು ಇದಕ್ಕಾಗಿ ಸಮಾಜವು 4 ತಂಡಗಳನ್ನು ರಚಿಸಿ ಅಂತಹವರನ್ನು ಗುರುತಿಸಿ ಕರೆಸುವ ಕೆಲಸ ಮಾಡುತ್ತಿದೆ. ಸಮೀಕ್ಷೆಗೆ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಸಮುದಾಯದ ಮನೆಗಳನ್ನು ಗುರುತಿಸಿ ನೋಂದಾಯಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಶ್ರೀರಾಂಪುರ ಮಹೇಶ್, ನಂಜುಂಡ ಸ್ವಾಮಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗುಟ್ಟದಹಟ್ಟಿ ರತ್ನಮ್ಮ, ನಿವೃತ್ತ ಅರಣ್ಯ ಅಧಿಕಾರಿ ಪಾಲಾಕ್ಷಪ್ಪ, ನಗರ ಘಟಕದ ಅಧ್ಯಕ್ಷ ಸತೀಶ್, ವಕೀಲ ಹೆಚ್.ಟಿ ತಿಪ್ಪೇಶ್, ಕಾರ್ಯದರ್ಶಿ ಜಯಣ್ಣ, ಚನ್ನವೀರಪ್ಪ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಪರಮೇಶ್ ಮತ್ತಿತರರು ಇದ್ದರು.