ಬಳ್ಳಾರಿ : ರಾಜ್ಯ ಸರ್ಕಾರದ ಹಿಂದುಳಿದ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂ ನಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಎಂಬುದಾಗಿ ನಮೂದಿಸಬೇಕು ಎಂದು ರಾಜ್ಯ ಶ್ರೀಮಾದರ ಚನ್ನಯ್ಯ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮೇಶ್ ಜೋಳದರಾಶಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಒಳಮೀಸಲಾತಿ ಆದೇಶವು ಪ್ರಕಟಗೊಂಡಿದೆ. ಕಾಲಂ ಎರಡಲ್ಲಿ ಆಯೋಗದ ವರದಿಯಲ್ಲಿನ ಪ್ರವರ್ಗ - ಇ ರಲ್ಲಿನ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಮೂರು ಸಮುದಾಯವು ತಮ್ಮ ಮೂಲ ಜಾತಿಯನ್ನು ತಿಳಿಸದೆ ಇರುವುದರಿಂದ ಮೂರು ಜಾತಿಗಳು ಅನುಬಂಧಗಳಲ್ಲಿರುವ ಪ್ರವರ್ಗ - ಎ ಅಥವಾ ಬಿ - ಗುಂಪುಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯಬಹುದಾಗಿದೆ. ಈ ಆದೇಶವು ಒಳಮೀಸಲಾತಿಯ ಆಶಯವನ್ನೇ ಬುಡಮೇಲು ಮಾಡುತ್ತದೆ. ಏಕೆಂದರೆ, ಈ ಮೇಲಿನ ಜಾತಿಗಳಲ್ಲಿ ಮಾದಿಗರೋ ಅಥವಾ ಹೊಲೆಯರೂ ಇಬ್ಬರು ಇರಬಹುದು. ಎ ಮತ್ತು ಬಿ ನಲ್ಲಿನ ಮೊದಲಿನ ಹಾಗೆ ಮೀಸಲಾತಿಯನ್ನು ಕಬಳಿಸುವುದು ಕಂಡು ಬರುತ್ತದೆ. ಇದರಿಂದ, ಎರಡು ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಆದ್ದರಿಂದ, ಇವರನ್ನು ತಮ್ಮ ಮೂಲ ಜಾತಿಯನ್ನು ಬರೆಯಿಸಿಕೊಂಡು ಅವರು ಎ ಹಾಗೂ ಬಿ ಗೆ ಸಂಬಂಧಿಸಿದ್ದರೆ ಸೌಲಭ್ಯ ಪಡೆಯಬದಾಗಿದೆ ಎಂಬುದಾಗಿ ಸರ್ಕಾರ ಮರುಪರಿಶೀಲಿಸಿ ಆದೇಶ ಹೊರಡಿಸಬೇಕು. ಅಲ್ಲದೆ, ಆಯೋಗವು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಪದಗಳನ್ನು ಗೆಜೆಟ್‌ನಿಂದ ತೆಗೆಯಬೇಕು ಎಂದರು. ಮುಖಂಡರಾದ ಚಿದಾನಂದಪ್ಪ, ನಾರಾಯಣಪ್ಪ, ಡಾ.ಟಿ.ದುರುಗಪ್ಪ, ವೀರೇಶ್, ಗೂಳಪ್ಪ, ಎ.ಕೆ.ಮಾರಪ್ಪ ಇದ್ದರು.