

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ (ಜಾತಿ ಜನಗಣತಿ)ಸಮೀಕ್ಷೆಯಲ್ಲಿ ಕಾಡುಗೊಲ್ಲ ಸಮುದಾಯದ ಜನರು ಜಾತಿ ಕಾಲಂನಲ್ಲಿ ‘ಕಾಡುಗೊಲ್ಲ’ ಎಂದೇ ನಮೂದಿಸಬೇಕೆಂದು ವಿಶ್ವರೂಪ ಕಾಡುಗೊಲ್ಲರ ಸಂಘ ಮನವಿ ಮಾಡಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸಿ.ಕುಮಾರ್ ಮಾತನಾಡಿ, ಉಪಜಾತಿಯಲ್ಲಿಯೂ ಕಾಡುಗೊಲ್ಲ ಎಂದೇ ಬರೆಸಬೇಕು. ನಮ್ಮ ಸಮುದಾಯ ಕಡುಬಡತನದಿಂದ ಕೂಡಿದೆ. ಶಿಕ್ಷಣದಿಂದ ವಂಚಿತವಾಗಿದೆ. ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ಮೊಟುಕುಗೊಳಿಸಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪಶುಸಂಗೋಪನೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ನಮ್ಮ ಜನಾಂಗ, ಇಂದಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದೆ ಎಂದರು.
ಸಮುದಾಯದ ಹಿರಿಯ ಮುಖಂಡ ಇ.ದೊಡ್ಡನಾಗಯ್ಯ ಮಾತನಾಡಿ, ನಮ್ಮ ಸಮುದಾಯದವರು ಕೃಷಿ ನಡೆಸಿ ಜೀವನ ಮಾಡುತ್ತಿದ್ದಾರೆ. ಸಮೀಕ್ಷೆಯಲ್ಲಿ ನಿಖರ ಮಾಹಿತಿ ನೀಡದಿದ್ದರೆ ಸರ್ಕಾರದ ಸವಲತ್ತುನಿಂದ ನಾವೆಲ್ಲರೂ ವಂಚಿತರಾಗುತ್ತೇವೆ. ಆದ್ದರಿಂದ, ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ಕಾಡುಗೊಲ್ಲ’ ಎಂದೇ ನಮೂದಿಸಬೇಕು ಎಂದರು.