

ಮೈಸೂರು: ಎಲ್ ನಿನೋ ಪ್ರಭಾವದಿಂದ ಮಳೆಯ ಕೊರತೆ ಆಗಿದ್ದು, ನದಿ, ಕೆರೆ, ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರಿಗೆ ಕೊರತೆ ಆಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲೂ ಕೊಳವೆ ಬಾವಿಗಳ ನೀರಿನ ಮಟ್ಟ ಪರೀಕ್ಷಿಸಿ, ಅಂತರ್ಜಲ ಎಷ್ಟು ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ಅಂದಾಜು ಮಾಡಬೇಕು. ಅದೇ ರೀತಿ ಮೇಲ್ಮೈ ನೀರಿನ ಲಭ್ಯತೆ ಎಷ್ಟಿದೆ, ಎಷ್ಟು ಕೊಳವೆ ಬಾವಿ ಇದೆ. ಎಷ್ಟು ಖಾಸಗಿ ಕೊಳವೆ ಬಾವಿ ಇದೆ. ಎಷ್ಟು ನೀರಿನ ಟ್ಯಾಂಕರ್ ಲಭ್ಯವಿದೆ ಎಂಬ ಅಧ್ಯಯನ ಮಾಡಿ, ಮುಂದಿನ 7 ತಿಂಗಳಿಗೆ ನೀರು ಪೂರೈಸಲು ಯೋಜನೆ ರೂಪಿಸುವಂತೆ ಸೂಚಿಸಿದರು.
ಏಕಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಕೋಟ್ಯಾಂತರ ರೂ. ವೆಚ್ಚ ಮಾಡುತ್ತಿದ್ದರೂ, ನೀರು ಬಾರದಿದ್ದರೆ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಹೀಗಾಗಿ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಕೊಡಬೇಕು ಎಂದು ನಿರ್ದೇಶನ ನೀಡಿದರು.
ನೀರು ಜೀವಜಲ, ನೀರಿಲ್ಲದೆ ಜನರು ಬದುಕಲು ಸಾಧ್ಯವಿಲ್ಲ. ಹೀಗಾಗಿ ದೂರು ಬಂದ 24 ಗಂಟೆಗಳ ಒಳಗಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ಹಾಗೂ ಜೆಜೆಎಂ ಎಂಜಿನಿಯರುಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಭಾರತ ಹಳ್ಳಿಗಳ ದೇಶ. ಹಳ್ಳಿಗಳೇ ದೇಶದ ಆತ್ಮ. ದೇಶದಲ್ಲಿ 6.4 ಲಕ್ಷ ಹಳ್ಳಿಗಳಿವೆ, ರಾಜ್ಯದಲ್ಲಿ ಸುಮಾರು 30 ಸಾವಿರ ಹಳ್ಳಿಗಳಿವೆ. ದೇಶದಲ್ಲಿ ಒಟ್ಟಾರೆ 2.68 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿದ್ದರೆ ರಾಜ್ಯದಲ್ಲಿ 31 ಜಿಲ್ಲಾ ಪಂಚಾಯತಿಗಳಿವೆ. 239 ತಾಲೂಕು ಪಂಚಾಯತಿಗಳಿವೆ. 5927 ಗ್ರಾಮ ಪಂಚಾಯತಿಗಳಿವೆ. ಈ ಎಲ್ಲ ಗ್ರಾಮಗಳ ಅಭಿವೃದ್ಧಿ ಮಾಡುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.
ವಿಬಿಜಿ ರಾಮ್ ಜಿ ಯೋಜನೆಯಡಿ ಯಾವ ಗ್ರಾಮದಲ್ಲಿ ಎಷ್ಟು ಉದ್ಯೋಗ ನೀಡಲಾಗಿದೆ ಎಂಬ ಪರಾಮರ್ಶೆ ನಡೆಸಿದ ಅವರು, ನಿರ್ಲಕ್ಷೃ ತೋರಿರುವ ಪಿಡಿಓಗಳಿಗೆ ಎಚ್ಚರಿಕೆ ನೀಡಿದರು. ಅಕುಶ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸ್ವಾಧೀನದಲ್ಲಿ ಮತ್ತು ನಿರ್ವಹಣೆಯಲ್ಲಿರುವ 2822 ಕೆರೆಗಳ ಪೈಕಿ 82 ಕೆರೆಗಳ 200 ಎಕರೆ ಭೂಮಿ ಒತ್ತುವರಿಯಾಗಿದೆ. ಇದರ ತೆರವಿಗೆ ಕ್ರಮ ವಹಿಸಿ, ಕೆರೆ ಸಂರಕ್ಷಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತ ವೈ.ಎಸ್. ಪಾಟೀಲ್, ಮೈಸೂರು ಸಿಇಒ ಯುಕೇಶ್ ಕುಮಾರ್, ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಶೇಖ್ ತನ್ವೀರ್ ಆಸಿಫ್, ವಿಬಿಜಿ ರಾಮ್ ಜಿ ನಿರ್ದೇಶಕ ದಿಡ್ಡಿಮನಿ ಮತ್ತಿತರರು ಇದ್ದರು.
ಜಲ ಆಯವ್ಯಯ (ವಾಟರ್ ಬಜೆಟಿಂಗ್) ಎಂದರೆ ಏನು?
ಈ ಪ್ರಶ್ನೆ ಕೇಳಿದ್ದು ಬೇರೆ ಯಾರೋ ಅಲ್ಲ. ಸ್ವತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಈಶ್ವರ ಬಿ ಖಂಡ್ರೆ. ಆದರೆ ಈ ಪ್ರಶ್ನಗೆ ಅಧಿಕಾರಿಗಳ ಬಳಿಯಲ್ಲಿಯೇ ಉತ್ತರ ಇಲ್ಲದೆ ಇದ್ದಾಗ ಸಚಿವರು ಆಕ್ರೋಶಗೊಂಡರು. ಇಷ್ಟೂ ಅರಿವಿಲ್ಲದೆ ಕೆಲಸ ಹೇಗೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಯಾವ ಗ್ರಾಮದಲ್ಲಿ ಎಷ್ಟು ಕೊಳವೆ ಬಾವಿ ಇದೆ, ತೆರೆದ ಬಾವಿ ಇದೆ, ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ. ಅನ್ಯ ಜಲಮೂಲಗಳು ಇವೆಯೇ. ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಮುಂದಿನ 1 ವರ್ಷಕ್ಕೆ ಎಷ್ಟು ನೀರಿನ ಅಗತ್ಯವಿದೆ, 5 ವರ್ಷಕ್ಕೆ ಎಷ್ಟು ನೀರು ಬೇಕು. ಶಾಲೆ, ಕಾಲೇಜು, ಅಂಗನವಾಡಿ, ಆಸ್ಪತ್ರೆ, ಕೈಗಾರಿಕೆಗಳಿಗೆ ಎಷ್ಟು ನೀರಿನ ಅಗತ್ಯವಿದೆ. ಮುಂದಿನ 30 ವರ್ಷದಲ್ಲಿ ಮೇಲ್ಮೈ ನೀರಿನಿಂದ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವೇ ಎಂದು ಅಂದಾಜು ಮಾಡಿ ಯೋಜನೆ ರೂಪಿಸುವುದೇ ಜಲ ಬಜೆಟಿಂಗ್ ಎಂದು ಸಚಿವರು ವಿವರಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಏಕ ಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯದಲ್ಲಿ ಸರ್ಕಾರ ಒಟ್ಟಾರೆ 67 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಉಪ ಕಾರ್ಯದರ್ಶಿಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯಡಿ ಎಲ್ಲ ಗ್ರಾಮಗಳಿಗೆ, ಗ್ರಾಮದ ಕೊನೆಯ ಮನೆಗೂ ನೀರು ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.