ಪಡಿತರದಿಂದ ಫಲಾನುಭವಿ ವಂಚಿತನಾಗದಂತೆ ಗಮನಹರಿಸಿ

ಪಡಿತರದಿಂದ ಫಲಾನುಭವಿ ವಂಚಿತನಾಗದಂತೆ ಗಮನಹರಿಸಿ
Published on

ಹನೂರು: ಯಾವೊಬ್ಬ ಫಲಾನುಭವಿಯೂ ಪಡಿತರದಿಂದ ವಂಚಿತರಾಗದಂತೆ ಸೇವೆ ಒದಗಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನ್ಯಾಯಬೆಲೆ ಅಂಗಡಿ ವಿತರಕರ ಕುಂದುಕೊರತೆ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡತನ ವರ್ಗಕ್ಕೆ ಸೇರಿದ ಕುಟುಂಬಗಳಿವೆ. ಸರ್ಕಾರದಿಂದ ನೀಡುವ ಪಡಿತರವನ್ನೇ ಹೆಚ್ಚು ಅವಲಂಬಿಸಿವೆ. ಹಾಗಾಗಿ ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿ ಪಡಿತರವನ್ನು ವಿತರಿಸುವುದು ಎಲ್ಲರ ಆದ್ಯ ಕರ್ತವ್ಯ. ಈ ಭಾಗದ ಕೆಲವು ಕಾಡಂಚಿನ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಬಯೋಮೆಟ್ರಿಕ್‌ಗೆ ತೊಡಕಾಗಿದ್ದು, ಪಡಿತರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಫಲಾನುಭವಿಗಳು ಪಡಿತರದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆ ಉಂಟಾದಲ್ಲಿ ಕೂಡಲೇ ಕ್ರಮವಹಿಸಿ ಬಗೆಹರಿಸಬೇಕು. ಒಂದು ವೇಳೆ ಫಲಾನುಭವಿ ಅಸಹಾಯಕನಾಗಿದ್ದು, ನ್ಯಾಯಬೆಲೆ ಅಂಗಡಿಗೆ ಬರಲು ಸಾಧ್ಯವಾಗದಿದ್ದಲ್ಲಿ ಮನೆ ಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆಯಾಗಬೇಕು. ಇನ್ನು ಅಡ್ಡಿಯಾಗುತ್ತಿರುವ ಬಯೋಮೆಟ್ರಿಕ್ ವ್ಯವಸ್ಥೆಗೆ ಮುಖ ದೃಢೀಕರಣದ ಬಗ್ಗೆ ತಾಂತ್ರಿಕತೆಯನ್ನು ಅಳವಡಿಸುವ ನೂತನ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಇಲಾಖೆಯ ಉಪ ನಿರ್ದೇಶಕ ಯೋಗಾನಂದ್ ಮಾತನಾಡಿ, ಈಗಾಗಲೇ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಪಡಿತರವನ್ನು ವಿತರಿಸಲಾಗುತ್ತಿದೆ. ಬಯೋಮೆಟ್ರಿಕ್ ಸಮಸ್ಯೆ ಇರುವ ಅಂಗಡಿಗಳಿಗೆ ಶೇ.2ರಷ್ಟು ವಿನಾಯಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮುಖ ದೃಢೀಕರಣ ವ್ಯವಸ್ಥೆ ಅಳವಡಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜತೆಗೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದರ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು. ಇನ್ನು ವಿತರಕರು ಎಲ್ಲ ಗ್ರಾಹಕರಿಗೂ ಪಡಿತರ ತಲುಪಿಸುವುದನ್ನು ಖಾತ್ರಿಪಡಿಸಿ ಉತ್ತಮ ಸೇವೆ ಒದಗಿಸಬೇಕು ಎಂದರು.

ಈ ಸಂದರ್ಭ ವಿತರಕರಿಂದ ಪಡಿತರ ಚೀಟಿದಾರರ ಸಂಖ್ಯೆ ಪಡೆಯಲಾಯಿತಲ್ಲದೇ ಸಮಸ್ಯೆಗಳ ಬಗ್ಗೆ ಕೆಲಕಾಲ ಚರ್ಚಿಸಲಾಯಿತು. ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಆಹಾರ ಶಿರಸ್ತೇದಾರ್ ವಿಶ್ವನಾಥ್ ಹಾಗೂ ವಿವಿಧ ಗ್ರಾಮಗಳ ವಿತರಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net