ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಗಮನಹರಿಸಿ: ಭೋಸರಾಜು

download
Published on

ಮಡಿಕೇರಿ: ಜಿಲ್ಲೆಯಲ್ಲಿ ಯಾವ ಗ್ರಾಮಗಳಲ್ಲಿಯೂ ಸಹ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸುವಂತೆ ತಾ.ಪಂ.ಇಒಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು. ಗ್ರಾಮೀಣ ಜನರಿಗೆ ಆರೋಗ್ಯ ಸೇವೆಗಳು ಸಮರ್ಪಕವಾಗಿ ತಲುಪಬೇಕು. ಇತ್ತೀಚೆಗೆ ಕಂದಾಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ೯೪ಸಿ ಮತ್ತು ೯೪ಸಿಸಿ ಅರ್ಜಿಗಳ ವಿಲೇವಾರಿ ಸಂಬಂಧ ತ್ವರಿತ ವಿಲೇವಾರಿ ಮಾಡಲು ಸೂಚಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ೯೪ಸಿ ಮತ್ತು ೯೪ ಸಿಸಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.


ಭೂ ದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ್ ಮಾತನಾಡಿ, ಪೊನ್ನಂಪೇಟೆಯಲ್ಲಿ ಶೇ.೬೦ರಷ್ಟು ಅರ್ಜಿಗಳ ವಿಲೇವಾರಿಯಾಗಿದೆ. ಮಡಿಕೇರಿಯಲ್ಲಿ ೫೦ ಅರ್ಜಿಗಳು ಬಾಕಿ ಇದ್ದು, ಪ್ರಗತಿಯಲ್ಲಿದೆ ಎಂದು ತಿಳಿಸಿದರು.


ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮರಗೋಡು ಗ್ರಾಮದಲ್ಲಿ ೬೬ ಕೆ.ವಿ. ವಿದ್ಯುತ್ ಘಟಕ ನಿರ್ಮಾಣ ಸಂಬಂಧ ಜಾಗವನ್ನು ತ್ವರಿತವಾಗಿ ಒದಗಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.


ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ಜಾಗ ಸಂಬಂಧಿಸಿದಂತೆ ಸ್ಥಳೀಯರ ಜೊತೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.


ಸಭೆಯಲ್ಲಿ ತಾ.ಪಂ.ಇಒಗಳಾದ ಶೇಖರ್, ಜಯಣ್ಣ, ಅಪ್ಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net