ಪಂಕ್ತಿಸೇವೆ ಆಚರಣೆಗೆ ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ

3-kollegal-3,,,
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಮಠದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಜ. 13 ರಿಂದ 17ರವರೆಗೆ ನಡೆಯುವ ಚಿಕ್ಕಲ್ಲೂರು ಜಾತ್ರೆ ಮಹೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪನಾಗ್ ಮಾತನಾಡಿದರು.
Published on

ಕೊಳ್ಳೇಗಾಲ: ಚಿಕ್ಕಲ್ಲೂರಿನಲ್ಲಿ ಬಲಿ ಪೀಠವಿಲ್ಲ. ಈ ಹಿನ್ನೆಲೆಯಲ್ಲಿ ಜಾತ್ರೆಯ ನಾಲ್ಕನೇ ದಿನವಾದ ಪಂಕ್ತಿಸೇವೆ ಆಚರಣೆಗೆ ಭಕ್ತರಿಗೆ ತೊಂದರೆ ಆಗದಂತೆ ಅವಕಾಶ ಕಲ್ಪಿಸಬೇಕೆಂದು ಶಾಸಕದ್ವಯರು ಅಧಿಕಾರಿಗಳಿಗೆ ತಿಳಿಸಿದರು.

ಜ.13 ರಿಂದ 17 ರವರೆಗೆ ನಡೆಯುವ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ ಮಹೋತ್ಸವದ ಅಂಗವಾಗಿ ತಾಲೂಕಿನ ಚಿಕ್ಕಲ್ಲೂರು ಹಳೇ ಮಠದ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ತಲೆತಲಾಂತರದಿಂದಲೂ ಪಂಕ್ತಿಸೇವೆ ನಡೆದುಕೊಂಡು ಬಂದಿದೆ. ನಮ್ಮ ತಂದೆ ಬಿ.ರಾಚಯ್ಯ ಅವರು ನಮ್ಮನ್ನು ಕರೆತಂದು ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದರು. ಅಂದು ಈ ಪ್ರದೇಶವೆಲ್ಲವೂ ಕಾಡಾಗಿತ್ತು. ಈಗ ಜನವಸತಿ ಪ್ರದೇಶವಾಗಿದೆ. ಕೃಷಿ ಪ್ರದೇಶವಾಗಿದೆ. ಶ್ರೀ ಸಿದ್ದಪ್ಪಾಜಿ ಒಕ್ಕಲಿನ ಮಕ್ಕಳು ದೇವಸ್ಥಾನದ ದೂರದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಫಂಕ್ತಿಸೇವೆಯನ್ನು ಮಾಡಿ ಸಂತೋಷದಿಂದ ತಮ್ಮ ಊರುಗಳಿಗೆ ತೆರಳುತ್ತಾರೆ. ಈ ಪಂಕ್ತಿ ಸೇವೆ ದಿನ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ, ಚೆಕ್‌ಪೋಸ್ಟ್ ನಿರ್ಮಿಸಿ ಅಲ್ಲಿ ಪ್ರಾಣಿಗಳನ್ನು ತಪಾಸಣೆ ಮಾಡುವುದು ಬೇಡ. ಸಾರ್ವಜನಿಕರು ಜಾತ್ರೆ ನಡೆಸಲು ಅವಕಾಶ ಕಲ್ಪಿಸಿ ಎಂದು ಹೇಳಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಚಿಕ್ಕಲ್ಲೂರಿಗೆ ಬರುವ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದೆ. ಇದೀಗ ಮೋಡಹಳ್ಳಿಯಿಂದ ದೊಡ್ಡಿಂದುವಾಡಿವರೆಗೆ ( 2 ಕಿ.ಮೀ), ಮೊಳಗನಕಟ್ಟೆಯಿಂದ ಕೊತ್ತನೂರು(9 ಕಿ.ಮೀ.)ವರೆಗಿನ ರಸ್ತೆಗೆ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರಸ್ತೆಯು ಉತ್ತಮ ರೀತಿಯಲ್ಲಿ ರಸ್ತೆ ಅಭಿವೃದ್ಧಿಗೊಳ್ಳುತ್ತದೆ. ಐದು ದಿನಗಳು ನಡೆಯುವ ಜಾತ್ರೆಗೆ ಮೂಲ ಸೌಕರ್ಯ ಒದಗಿಸಬೇಕು. ಪಂಕ್ತಿಸೇವೆ ದಿನ ಸಾರ್ವಜನಿಕರಿಗೆ ತೊಂದರೆ ನೀಡಬಾರದು. ದೇವಾಲಯದಲ್ಲಿ ಬಲಿಪೀಠ ಇಲ್ಲ. ಹಾಗಾಗಿ ಅಧಿಕಾರಿಗಳು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಬೇಕೆಂದು ಹೇಳಿದರು.

ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕವಿತಾ ಮಾತನಾಡಿ, ಚಿಕ್ಕಲ್ಲೂರು ಜಾತ್ರೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರು ಜಾತ್ರೆಗೆ ಬಂದು ಹೋಗುವ ಸುಗಮ ಸಂಚಾರಕ್ಕೆ ಸುಮಾರು 800ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಜಾತ್ರೆಗೆ ಹನೂರು ಮತ್ತು ಕೊಳ್ಳೇಗಾಲ ಕಡೆಯಿಂದ ಬರುವವರಿಗೆ ಸಂಚಾರಕ್ಕೆ ವ್ಯವಸ್ಥೆ ಮಡಲಾಗಿದೆ. ಜಾತ್ರೆ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನಿಗಾವಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, 5 ದಿನಗಳು ನಡೆಯುವ ಚಿಕ್ಕಲ್ಲೂರು ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮೂಲ ಸೌಕರ್ಯವನ್ನು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಿ ಮಾಡಬೇಕು. ನ್ಯಾಯಾಲಯದ ಆದೇಶದಂತೆ ನಾವು ಪ್ರಾಣಿ ಬಲಿ ಮಾಡಲು ಅವಕಾಶ ನೀಡುವುದಿಲ್ಲ. ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಪ್ರಾಣಿ ಬಲಿ ತಡೆಯುವ ಉದ್ದೇಶದಿಂದ 3 ಪಾಳಿಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕೆಂದು ಹೇಳಿದರು.

ಜಿ.ಪಂ ಸಿಇಒ ಮೋನಾ ರೋತ್, ಉಪ ವಿಭಾಗಾದಿಕಾರಿ ಮಹೇಶ್, ಡಿವೈಎಸ್ಪಿ ಧಮೇರ್ಂದ್ರ, ತಹಸಿಲ್ದಾರ್ ಬಸವರಾಜು, ಸಿಪಿಐ ಶಿವಮಾದಯ್ಯ, ಸಿದ್ದಪ್ಪಾಜಿ ದೇವಸ್ಥಾನದ ಟ್ರಸ್ಟಿಗಳಾದ ಭರತ್ ರಾಜೇ ಅರಸ್, ಜ್ಞಾನನಂದರಾಜೇ ಅರಸ್, ಉಪ ತಹಸೀಲ್ದಾರ್ ವಿಜಯಕುಮಾರ್, ರಾಜಸ್ವ ನಿರೀಕ್ಷಕ ರಂಗಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net