

ವಿಜಯಪುರ: ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನಿಗಾವಹಿಸಿ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಯೋಜನೆ ಸಿದ್ಧಪಡಿಸಿಕೊಂಡು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಒತ್ತು ನೀಡಲು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣ ಪತ್ತೆ ಹಚ್ಚಿ ಸಂಬಂಧಿಸಿದ ಪಾಲಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಸಾಮಾಜಿಕ ಕಾಳಜಿ ಹೊಂದಿ ಕಾರ್ಯ ನಿರ್ವಹಿಸುವಂತೆ ಅವರು ಹೇಳಿದರು.
ಮಕ್ಕಳ ಆಧಾರ ಸೀಡಿಂಗ್ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದ ಘೋಷ್ ಅವರು, ಮಕ್ಕಳ ಆಧಾರ್ ದಾಖಲಾತಿಯಲ್ಲಿ ಪ್ರಗತಿ ಹೊಂದಬೇಕು. ಅತ್ಯಂತ ಪ್ರಮುಖ ದಾಖಲೀಕರಣ ಕಾರ್ಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದೇ ಪ್ರಗತಿ ತೋರಬೇಕು. ಮಕ್ಕಳ ದಾಖಲಾತಿಯೊಂದಿಗೆ ಆಧಾರ್ ಸೀಡಿಂಗ್ ಪ್ರಗತಿ ಹೆಚ್ಚಿಸಬೇಕು. ಶಾಲೆಯಲ್ಲಿ ಆಗಾಗ ನಡೆಯುವ ಶಿಕ್ಷಕ-ಪಾಲಕರ ಸಭೆಯಲ್ಲಿ ಈ ಬಗ್ಗೆ ಪಾಲಕರಿಗೆ ಮಕ್ಕಳ ಭವ್ಯ ಭವಿತವ್ಯದ ದೃಷ್ಟಿಯಿಂದ ದಾಖಲೀಕರಣದ ಮಹತ್ವದ ಕುರಿತು ತಿಳಿಸಿಕೊಡುವ ಮೂಲಕ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದರು.
ವಿವಿಧ ಇಲಾಖೆಯಲ್ಲಿ ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯೊಳಗೆ ಇತ್ಯರ್ಥಪಡಿಸಿ ಬಾಕಿ ಉಳಿಯದಂತೆ ಕ್ರಮವಹಿಸಬೇಕು. ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣೆ ಹಾಗೂ ಖಾತಾಗಳಿಗೆ ತಾಲೂಕಿನ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ತಾಲೂಕಾಡಳಿತ ಕಟ್ಟಡಕ್ಕೆ ಅವಶ್ಯ ಇರುವ ಜಾಗ ಗುರುತಿಸಬೇಕು. ಬಿಯೂಟ ಸಮರ್ಪಕವಾಗಿ ಒದಗಿಸಬೇಕು. ನಿಯಮಾನುಸಾರ ಮೆನುವಿನಂತೆ ಇರುವಂತೆ ನೋಡಿಕೊಳ್ಳಬೇಕು. ಆಹಾರ ಗುಣಮಟ್ಟದ ಬಗ್ಗೆ ಸಂಬಂಧಿಸಿದವರು ಪರಿಶೀಲನೆ ನಡೆಸಬೇಕು ಎಂದರು.
ಅಂಗನವಾಡಿಗೆ ಹೊಸ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಈಗಾಗಲೇ ಹೊಸದಾಗಿ ಅಂಗನವಾಡಿ ಕಟ್ಟಡ ಅನುಮೋದನೆಗೊಂಡಿದ್ದು, ಯಾವುದೇ ಸಮಸ್ಯೆ ಇಲ್ಲದಿರುವುದನ್ನು ಪರಿಶೀಲಿಸಿಕೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಈಗಾಗಲೇ ಕೊರೆದ ಬೋರವೆಲ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಆದ್ಯತೆಯ ಮೇರೆಗೆ ನೀಡಬೇಕು. ಜಿಲ್ಲೆಯಲ್ಲಿ ಜನನ ಮತ್ತು ಮರಣ ನೋಂದಣಿ ಉತ್ತಮವಾಗಿದೆ. ಜೆಜೆಎಂ ಯೋಜನೆಯ ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವೂ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ಹಾಗೂ ಹಾವು ಕಡಿತ ಲಸಿಕೆಗಳನ್ನು ಸಾಕಷ್ಟು ದಾಸ್ತಾನು ಹೊಂದಬೇಕು. ಡಿಎಚ್‌ಒ ಅವರು ನಿರಂತರ ಮಾನಿಟರಿಂಗ್ ಮಾಡಬೇಕು. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪ್ರಥಮಾದ್ಯತೆ ಮೇರೆಗೆ ಅರ್ಜಿ ಸ್ಥಿತಿಗತಿ ಪರಿಶೀಲಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಇತ್ಯರ್ಥಪಡಿಸಿ ವಿದ್ಯಾರ್ಥಿಗಳಿಗೆ ಅನುಕೂಲಒದಗಿಸಿಕೊಡಬೇಕೆಂದು ಹೇಳಿದರು. ಎಲ್ಲ ವಸತಿ ನಿಲಯಗಳಲ್ಲಿ ಅಗತ್ಯ ಮೂಲ ಸೌಕರ್ಯ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ತಾಲೂಕಿನ ಕಂದಾಯ ಇಲಾಖೆಯ ಇ-ಆಫೀಸ್ ಅಳವಡಿಸಿಕೊಳ್ಳಬೇಕು. ಉದ್ಭವಿಸುವ ತಾಂತ್ರಿಕ ಸಮಸ್ಯೆ ನೀಗಿಸಿಕೊಂಡು ಆದಷ್ಟು ಇ ಆಫೀಸ್ ಮೂಲಕ ಕಾರ್ಯನಿರ್ವಹಿಸುವಂತೆಯೂ, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಇ-ಆಫೀಸ್ ಜನೆವರಿಯೊಳಗೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಕೃಷಿ ಮಾರುಕಟ್ಟೆ ಇಲಾಖೆ, ಪಶುಸಂಗೋಪನಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಎಎಸ್‌ಪಿ ಶಂಕರ ಮಾರಿಹಾಳ, ಎಡಿಸಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಮತ್ತಿತರರಿದ್ದರು.