ಗುಣಮಟ್ಟದ ಕಾಮಗಾರಿಯಾಗುವಂತೆ ನಿಗಾವಹಿಸಿ

Road Extention Project Bhoomi Pooje
Published on

ಕುಮಟಾ: ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮಂಜೂರಿ ಪಡೆದಿದ್ದ ಒಂದು ಕೋಟಿ ರೂ. ವೆಚ್ಚದ ಮೂರೂರು ರಸ್ತೆಯ ಪ್ರಮುಖ ಭಾಗದ ವಿಸ್ತರಣಾ ಕಾಮಗಾರಿಯನ್ನು ಆರಂಭಿಸುತ್ತಿದ್ದೇವೆ. ಅತ್ಯಂತ ಅವಶ್ಯಕವಾಗಿರುವ ಈ ಕಾಮಗಾರಿಯನ್ನು ಸಾರ್ವಜನಿಕರು ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ಸದಾ ಜಾಗೃತರಾಗಿದ್ದು ನಿಗಾವಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ಮೂರೂರು ಕ್ರಾಸ್​ನಲ್ಲಿ ಸೋಮವಾರ ಮೂರೂರು ರಸ್ತೆಯ 600 ಮೀ. ಭಾಗದಲ್ಲಿ ವಿಸ್ತರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಶಾಸಕನಾಗಿ ಪಟ್ಟಣದ ಮೂರೂರು ರಸ್ತೆಯ ಅಗಲೀಕರಣದ ಮಹತ್ವ ಅರಿತು ಸರ್ಕಾರಕ್ಕೆ ಮನವಿ ಮಾಡಿದ್ದೆ. ಅಂದು ಸರ್ಕಾರ ತಕ್ಷಣ ಸ್ಪಂದಿಸಿ ಅಗತ್ಯವಿರುವ ಮಂಜೂರಿ ನೀಡಿತ್ತು. ಆದ್ದರಿಂದ 2022-23 ನೇ ಸಾಲಿನ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಯೋಜನೆಯ ಲೆಕ್ಕ ಶೀರ್ಷಿಕೆ 5054 ರ ಅಡಿಯಲ್ಲಿ 1 ಕೋಟಿ ರೂ ವೆಚ್ಚದ ಕಾಮಗಾರಿಯ ಮೂಲಕ ರಸ್ತೆಯ ಇಕ್ಕೆಲಗಳನ್ನು ಸಮತಟ್ಟು ಹಾಗೂ ಅಗಲಗೊಳಿಸಿ, ಗಟಾರ ಸಹಿತ ಅಭಿವೃದ್ಧಿ ಪಡಿಸಲಾಗುವುದು. ಮಾಡಿದ ಕಾಮಗಾರಿ ಉತ್ತಮವಾಗಿರುವಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ನೋಡಿಕೊಳ್ಳಬೇಕು ಹಾಗೂ ಕಾಮಗಾರಿಗೆ ಪೂರಕವಾಗಿ ಸಹಕಾರವನ್ನೂ ನೀಡಬೇಕಾಗುತ್ತದೆ ಎಂದರು.

ಕಾಮಗಾರಿಯ ಗುತ್ತಿಗೆದಾರ ರಾಮನಾಥ ಶಾನಭಾಗ, ಪಿಡಬ್ಲು್ಯಡಿ ಎಇಇ ಎಂಪಿ.ನಾಯ್ಕ, ಎಇಇ ಸೋಮನಾಥ ಭಂಡಾರಿ, ಜಿ.ಎಸ್.ಗುನಗಾ, ಎಸ್.ವಿ.ಹೆಗಡೆ ಭದ್ರನ್, ಜಿ.ಐ.ಹೆಗಡೆ, ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಮಹೇಶ ನಾಯ್ಕ, ವಿನಯಾ ಜಾರ್ಜ, ಸೂರ್ಯಕಾಂತ ಗೌಡ, ಅನಿಲ ಹರ್ಮಲಕರ, ಮೋಹಿನಿ ಗೌಡ, ತುಳಸು ಗೌಡ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net