

ಹೊಳೆಹೊನ್ನೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕಿ ಶಾರದಾ ಪೂರ್ಯಾ ನಾಯ್ಕ ಹೇಳಿದರು.
ಸಮೀಪದ ಆನವೇರಿಯಲ್ಲಿ ಶುಕ್ರವಾರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್ ಸ್ಮಾರ್ಟ್‌ಕ್ಲಾಸ್ ರೂಂ ಉದ್ಘಾಟನೆ ಹಾಗೂ ದಾನಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರ ತೆಗೆಯುವಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಶಾಲಾ ಪ್ರೇಮ ಮೈಗೂಡಬೇಕು. ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಹೆಚ್ಚಾಗುತ್ತವೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಯಾವುದರಲ್ಲೂ ಕಮ್ಮಿ ಇಲ್ಲ. ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಗ್ರಾಮೀಣ ಕ್ಷೇತ್ರ ವಿಸ್ತಾರದಲ್ಲಿ ದೊಡ್ಡದಿರುವುದರಿಂದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ ಎಂದರು.
ಬಿಇಒ ನಾಗೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ನಿವೃತ್ತ ಶಿಕ್ಷಕ ರಂಗಪ್ಪ, ಪ್ರಮುಖರಾದ ನಟರಾಜಪ್ಪ ಗೌಡ, ವಿಜಯ್‌ಗೌಡ, ಬಸವರಾಜಪ್ಪ ಗೌಡ, ಸುರೇಶ್ ಗೌಡ, ರಪೀಕ್, ಟಿ.ಎಂ.ಸತೀಶ್, ಸಯ್ಯದ್ ಮನು, ಆಶ್ಪಾಕ್ ಮುನ್ನ, ಅರ್ಮಿಜಾನ್, ಜಾಫರ್, ಕುಬೇಂದ್ರಪ್ಪ ಇತರರಿದ್ದರು.