ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ

6 nrp 4
ಎನ್.ಆರ್.ಪುರದಲ್ಲಿ ನಡೆದ ಮಕ್ಕಳ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ರತ್ನಮ್ಮ ಉದ್ಘಾಟಿಸಿದರು. ಕೆ.ಆರ್.ಪುಷ್ಪಾ, ಮಧುಕುಮಾರ್, ಪ್ರಿಯೇಶ್ ಇದ್ದರು.
Published on

ಎನ್.ಆರ್.ಪುರ: ಮಕ್ಕಳು ಮೌಲ್ಯಯುತ ಶಿಕ್ಷಣ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಹೇಳಿದರು.
ಶನಿವಾರ ತಾಲೂಕಿನ ಹೊಸ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಇಂದು ಸರ್ಕಾರಿ ಶಾಲೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದನ್ನು ಮಕ್ಕಳು ಉಪಯೋಗಿಸಿಕೊಂಡು ಉತ್ತಮ ಅಂಕಪಡೆದು ಶಾಲೆಗೆ, ಪಾಲಕರಿಗೆ ಗೌರವ ತರಬೇಕು ಎಂದು ಕರೆ ನೀಡಿದರು.
ಬಾಳೆ ಗ್ರಾಪಂ ಸದಸ್ಯ ಮಧುಕುಮಾರ್ ಮಾತನಾಡಿ, ಶಾಲೆ ಅಭಿವೃದ್ಧಿಗೆ ಗ್ರಾಪಂ ಎಲ್ಲ ಸೌಲಭ್ಯ ನೀಡಿದ್ದು, ಮುಂದೆಯೂ ಸಹ ಶಾಲೆ ಕಾಂಪೌಡ್ ನಿರ್ಮಾಣಕ್ಕೂ ಹಂತ, ಹಂತವಾಗಿ ಸಹಕಾರ ನೀಡಲಾಗುವುದು ಎಂದರು.
ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಪಾಲಕರು ದುಬಾರಿ ಹಣ ನೀಡಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು. ಗ್ರಾಮದ ಮುಖಂಡ ಈಚಲದಾಳು ಮಂಜಪ್ಪಗೌಡ ಮಾತನಾಡಿ, ಹೊಸ್ಕೆರೆ ಶಾಲೆಗೆ ಆಟದ ಮೈದಾನದ ಅಗತ್ಯವಿದೆ. ಆದ್ದರಿಂದ ಸರ್ಕಾರ ಆಟದ ಮೈದಾನಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net