

ಬೆಂಗಳೂರು: ಬೆಳೆಗಳಲ್ಲಿ ವೈವಿಧ್ಯತೆ ಹಾಗೂ ಅಧಿಕ ಇಳುವರಿ ಪಡೆಯಲು ಮಣ್ಣಿನ ಸತ್ವ ಮುಖ್ಯ. ಇಂತಹ ಮಣ್ಣಿಗೆ ಕಾಂಪೋಸ್ಟ್ ಮಿಶ್ರಣ ಮಾಡಿ ಬಳಸುವುದರಿಂದ ಜಮೀನಿನಲ್ಲಿ ಮಣ್ಣಿನ ಸಾರ ಹೆಚ್ಚು ವರ್ಷ ಇರಲಿದ್ದು, ಬೆಳೆ ಕೂಡ ಹುಲುಸಾಗಿ ಬರಲಿದೆ ಎಂದು ಬೆಂಗಳೂರು ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದರು.
ಕೃಷಿ ವಿಶ್ವವಿದ್ಯಾಲದ ಕ್ಯಾಂಪಸ್ ಜಿಕೆವಿಕೆಯಲ್ಲಿ ಬುಧವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಕಾಂಪೋಸ್ಟಿಂಗ್ ಮತ್ತು ಸಸ್ಯ ಆರೋಗ್ಯ ದಿನ’ ಉದ್ಘಾಟಿಸಿ ಮಾತನಾಡಿದರು.
ಸ್ವ್ವಾತಂತ್ರ್ಯ ಪೂರ್ವದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಹಸಿರು ಕ್ರಾಂತಿಗೆ ಒತ್ತು ನೀಡಲಾಯಿತು. ಇದರಿಂದ ದೇಶವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿತು. ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಗಳ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ರಸಗೊಬ್ಬರ ಹಾಗೂ ಕೀಟನಾಶಕ ಬಳಸಿದ ಪರಿಣಾಮವಾಗಿ ಮಣ್ಣಿನ ಫಲವತ್ತತೆ ಕುಂಠಿತವಾಯಿತು. ಜತೆಗೆ ಆಹಾರ ಉತ್ಪಾದನೆಯ ವೆಚ್ಚವೂ ಸಹ ಹೆಚ್ಚಾಗಿ ಮಣ್ಣಿನ ಸತ್ವ ಕಳೆದುಕೊಂಡಿತು ಎಂದರು.
ಪ್ರಸ್ತುತ ಮಣ್ಣು ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಸೂಕ್ಮ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತ್ತಿದೆ. ಹಾಗಾಗಿ ರೈತರು ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಎರೆಗೊಬ್ಬರ ಮುಂತಾದ ಜೈವಿಕ ಹಾಗೂ ಸಾವಯವ ಗೊಬ್ಬರವನ್ನು ಸಕಾಲದಲ್ಲಿ ಮಣ್ಣಿಗೆ ಸೇರಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು. ಕೃಷಿಯಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡಾಗ ಶೇ.50 ಸಮಸ್ಯೆಗೆ ಪರಿಹಾರ ಮತ್ತು ಶೇ. 80 ಮಣ್ಣಿನ ಸವಕಳಿಯನ್ನು ಸಾವಯವ ವಸ್ತುಗಳ ಸಮರ್ಪಕ ಬಳಕೆಯಿಂದ ತಡೆಗಟ್ಟಬಹುದಾಗಿದೆ ಎಂದು ಡಾ. ಎಸ್.ವಿ.ಸುರೇಶ್ ವಿವರಿಸಿದರು.
ಕೃಷಿ ವಿದ್ಯಾರ್ಥಿಗೆ ಬಹುಮಾನ:
ಇದೇ ವೇಳೆ ಕೃಷಿ ವಿಸ್ತರಣಾ ವಿಭಾಗವು ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತಿಮ ವರ್ಷದ ಬಿಎಸ್ಸಿ (ಕೃಷಿ) ವಿದ್ಯಾರ್ಥಿ ಬಸವಲಿಂಗಪ್ಪ ನಾಯಕ್‌ಗೆ ಪ್ರಥಮ ಬಹುಮಾನ ಪಡೆಯಿತು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಾವಯವ ಕೃಷಿ ಸಾಮರ್ಥ್ಯ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಮೆನನ್, ಕೃವಿ ವಿವಿಯ ಕುಲಸಚಿವ ಡಾ. ಬಸವೇಗೌಡ, ಡೀನ್ (ಕೃಷಿ) ಡಾ. ಎನ್.ಬಿ. ಪ್ರಕಾಶ್, ಮಂಡ್ಯದ ಸಾವಯವ ಗೊಬ್ಬರ ಉತ್ಪಾದಕ ಶಿವಣ್ಣ, ಪ್ರಗತಿಪರ ರೈತ ವಿಶ್ವೇಶ್ವರ ಸಜ್ಜನ್ ಉಪಸ್ಥಿತರಿದ್ದರು.