

ಮಧುಗಿರಿ: ಪಟ್ಟಣದ ಅಭಿವೃದ್ಧಿಗೆಂದು ಜಾರಿಗೊಳಿಸಿದ ಯುಜಿಡಿ ಕಾಮಗಾರಿ ತಲೆನೋವಾಗಿ ಪರಿಣಮಿಸಿದ್ದು,
ಅವ್ಯವಸ್ಥೆ ಮತ್ತು ವಿಳಂಬದಿಂದ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದು, ನಾಗರಿಕರು ಹೈರಾಣಾಗಿದ್ದಾರೆ.
ಪಟ್ಟಣದಲ್ಲಿ 23 ವಾರ್ಡ್ಗಳಲ್ಲಿ ಯುಜಿಡಿ ಕಾಮಗಾರಿ ಆರಂಭವಾದ ದಿನದಿಂದಲೂ ನಾಗರಿಕರು ಕಿರಿಕಿರಿ ಅನುಭವಿಸುತ್ತಿದ್ದು, ಪ್ರತಿ ಮಳೆಗಾಲದಲ್ಲೂ ವಾರ್ಡ್ಗಳಲ್ಲಿ ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಅಭಿವೃದ್ಧಿಗೆಂದು ಕೆ.ಎನ್.ರಾಜಣ್ಣ ಯುಜಿಡಿ ಕಾಮಗಾರಿ ಮಂಜೂರು ಮಾಡಿಸಿದ್ದರು. ಆದರೆ ಕಾಮಗಾರಿ ತಡವಾಗಿ ಆರಂಭವಾಗಿದ್ದು, 2019 ಸೆಪ್ಟೆಂಬರ್ 10ರಂದು ಖಾಸಗಿ ಗುತ್ತಿಗೆದಾರರು ಯುಜಿಡಿ ಕಾಮಗಾರಿ ಆರಂಭಿಸಿ 6 ವರ್ಷ ಕಳೆದರೂ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಉತ್ತಮ ರಸ್ತೆಗಳನ್ನು ಹಾಳುಗೆಡವಿದ್ದೇ 6 ವರ್ಷಗಳ ಸಾಧನೆಯಾಗಿದೆ. 6 ವರ್ಷದಲ್ಲಿ ಪಟ್ಟಣದ ನಾಗರಿಕರಿಗೆ ಯುಜಿಡಿ ಕಾಮಗಾರಿ ನರಕದ ದರ್ಶನ ಮಾಡಿಸಿದೆ. ಬಹುತೇಕ ರಸ್ತೆಗಳು ಓಡಾಡಲಾಗದಂತಹ ಸ್ಥಿತಿ ತಲುಪಿವೆ. ಕೆಲವು ರಸ್ತೆಗಳಲ್ಲಿ ಸಂಚರಿಸುವಾಗ ಏಕಾಏಕಿ ಕುಸಿಯುತ್ತಿದ್ದು, ಸವಾರರು ಬಿದ್ದು ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ. ಇನ್ನು ಗುಂಡಿಗಳಲ್ಲಿ ಸಿಲುಕಿ ತೊಂದರೆ ಅನುಭವಿಸಿದ ಕಾರು, ಟ್ರ್ಯಾಕ್ಟರ್ಗಳೆಷ್ಟೋ...ಎಂಬುದು ಲೆಕ್ಕವೇ ಇಲ್ಲ.
ಬ್ಯಾರಿಕೇಡ್ ಇಟ್ಟಿಲ್ಲ
ಪಟ್ಟಣದ ಅಗಸರಹೊಳೆ ಸೇತುವೆಯ ಮುಖ್ಯರಸ್ತೆಯಲ್ಲೇ 5 ತಿಂಗಳಿಂದ ಯುಜಿಡಿ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿಗಾಗಿ ಆಳವಾದ ಗುಂಡಿತೋಡಿದ್ದಾರೆ. ಆದರೆ ಈ ಗುಂಡಿಗೆ ಅಡ್ಡವಾಗಿ ಬ್ಯಾರಿಕೇಡ್ ಇಟ್ಟಿಲ್ಲ. ಇದರಿಂದ ವಾಹನ ಸವಾರರು ಭಯದಲ್ಲೇ ವಾಹನ ಚಲಾಯಿಸಬೇಕಿದೆ.
ಪ್ರತಿ ಮಳೆಗಾಲದಲ್ಲೂ ಕೆಸರುಗದ್ದೆ
ಪ್ರತಿ ಮಳೆಗಾಲದಲ್ಲೂ ಕೆಲ ವಾರ್ಡ್ಗಳ ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಡುತ್ತವೆ. ಇನ್ನು ವಾರ್ಡ್ನಲ್ಲಿ ರಸ್ತೆಗಳು ಕುಸಿದಾಗ ಸಂಬಂಧಪಟ್ಟವರು ಮಣ್ಣು ಸುರಿಯುತ್ತಿರುವುದರಿಂದ ಮಳೆಗೆ ಕೆಸರು ಗದ್ದೆಯಂತಾಗುವ ರಸ್ತೆಗಳಿಂದಾಗಿ ಬೈಕ್ ಸವಾರರು, ಜನರು ಈ ಭಾಗದಲ್ಲಿ ಸಂಚರಿಸುವುದೆ ಸವಾಲಾದೆ. ಯುಜಿಡಿ ಪೈಪ್ಗಳನ್ನು ಅಳವಡಿಸಲು ರಸ್ತೆ ಮಧ್ಯೆ ಆಳವಾದ ಟ್ರಂಚ್ ಹೊಡೆದು ನಂತರ ಮುಚ್ಚಬೇಕು. ಆದರೆ ರಸ್ತೆಗಳಿಗೆ ತೇಪೆ ಹಾಕಲು ಜಲ್ಲಿ ಸುರಿದು ತಿಂಗಳೇ ಕಳೆದರೂ ಅತ್ತ ತಲೆ ಹಾಕುತ್ತಿಲ್ಲ. ಬಹುತೇಕ ವಾರ್ಡ್ಗಳಲ್ಲಿ ಇದೇ ಪರಿಸ್ಥಿತಿ ಇದೆ. ಪ್ರತಿನಿತ್ಯ ಸಾರ್ವಜನಿಕರ ದೂರುಗಳನ್ನು ಕೇಳಿ ಕೇಳಿ ವಾರ್ಡ್ನ ಸದಸ್ಯರಿಗೇ ಕಾಮಗಾರಿ ಅವ್ಯವಸ್ಥೆ ಬಗ್ಗೆ ಬೇಸರವಾಗಿದ್ದು, ಯಾಕಾದರೂ ಯುಜಿಡಿ ಕಾಮಗಾರಿ ಆರಂಭವಾಯಿತೋ ಎಂಬಂತಾಗಿದೆ.
ಇನ್ನೂ 5 ತಿಂಗಳು ಬೇಕಂತೆ
ಪಟ್ಟಣದಲ್ಲಿ ಇನ್ನೂ 660 ಮೀಟರ್ ಕಾಮಗಾರಿ ಬಾಕಿ ಇದ್ದು, 660 ಮೀಟರ್ ಗ್ಯಾಪ್ ಕ್ಲೋಸಿಂಗ್, ಎರಡು ಭಾಗಗಳಲ್ಲಿ ಲ್ಯಾಂಡ್ ಸಮಸ್ಯೆ ಇದ್ದು, ಇವೆಲ್ಲವನ್ನು ಬಗೆಹರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಇನ್ನೂ 4ರಿಂದ 5 ತಿಂಗಳು ಬೇಕಂತೆ. ಇನ್ನು ವಿದ್ಯಾನಗರದಲ್ಲಿ 3 ವರ್ಷಗಳಿಂದ ಹೊಸದಾಗಿ ನಿರ್ಮಿಸಿರುವ ಮನೆಗಳಿಗೆ ಹೊಸ ಅನುದಾನ ಬಂದರೆ ಮಾತ್ರ ಯುಜಿಡಿ ಕಾಮಗಾರಿ ಕೈಗೊಳ್ಳಲಾಗುವುದು ಎನ್ನುತ್ತಾರೆ ಯುಡಿಜಿ ಅಧಿಕಾರಿಗಳು. 23ನೇ ವಾರ್ಡ್ನ ಅದ್ವೆೃತ ಶಾಲೆಯ ಹಿಂಭಾಗ ಸೇರಿ ಪಟ್ಟಣದ ಕೆಲ ಭಾಗಗಳಲ್ಲಿ ಕಾಮಗಾರಿಯನ್ನೇ ನಡೆಸಿಲ್ಲ ಎನ್ನುತ್ತಾರೆ ನಾಗರಿಕರು.
ಸಂಪರ್ಕ ಪಡೆಯಲು ಹಿಂದೇಟು..?
ಈಗಾಗಲೇ ಕಾಮಗಾರಿ ಪೂರ್ಣಗೊಂಡ ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಮನೆಗಳಿಗೆ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆದಿದ್ದು, ಮನೆಯವರೇ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ಕನೆಕ್ಷನ್ ಪಡೆದುಕೊಳ್ಳಬೇಕು. ಕೆಳ ಹಂತದ ಮನೆಗಳಿಗೆ ಕನೆಕ್ಷನ್ಗಾಗಿ 1 ಸಾವಿರ ರೂ., ಮೊದಲನೇ ಮಹಡಿಯ ಮನೆಗಳಿಗೆ 1500 ರೂ., ಎರಡನೇ ಮಹಡಿಯ ಮನೆಗಳಿಗೆ 2 ಸಾವಿರ ರೂ. ಡಿಪಾಸಿಟ್ ನಿಗದಿಗೊಳಿಸಲಾಗಿದೆ. ಕನೆಕ್ಷನ್ ಪಡೆದ ನಂತರ ಪ್ರತಿ ತಿಂಗಳು ನೀರಿನ ಕರದ ಜತೆಗೆ 15 ರೂ. ಯುಜಿಡಿ ಕರ ಸೇರಿಸಿ ಪಾವತಿಸಬೇಕಾಗುತ್ತದೆ. ಆದರೆ ಪುರಸಭೆಯವರು ಕನೆಕ್ಷನ್ ನೀಡಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಯುಜಿಡಿ ಅಧಿಕಾರಿಗಳು ಆರೋಪಿಸಿದರೆ. ಯುಡಿಜಿ ವಿಳಂಬ ಕಾಮಗಾರಿಯಿಂದ ಬೇಸತ್ತಿರುವ ಜನತೆ ಕನೆಕ್ಷನ್ ನೀಡಲು ಮನೆಯ ಬಳಿ ಹೋದರೆ ಯುಡಿಜಿ ಕಾಮಗಾರಿಯೇ ಕಳಪೆಯಾಗಿದೆ, ಕನೆಕ್ಷನ್ ಪಡೆದರೆ ಇನ್ನೂ ಏನೇನು ಸಮಸ್ಯೆಗಳು ಉಲ್ಬಣಗೊಳ್ಳುತ್ತವೋ ಎಂಬ ಆತಂಕದಲ್ಲಿ ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.
4 ವರ್ಷದ ಬಳಿಕ ಕೆಲಸಕ್ಕೆ ವೇಗ
ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಕಾಮಗಾರಿಯಿಂದ ನಾಗರಿಕರಿಗೆ ಆಗುತ್ತಿದ್ದ ತೊಂದರೆ ಕಂಡ ಸಚಿವ ಕೆ.ಎನ್.ರಾಜಣ್ಣ, ಸಂಬಂಧಪಟ್ಟ ಯುಜಿಡಿ ಇಂಜಿನಿಯರ್ಗಳನ್ನು ಕರೆದು ಕಾಮಗಾರಿ ವಿಳಂಬದ ಬಗ್ಗೆ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಮಗಾರಿಗೆ ವೇಗ ದೊರೆತಿದೆ. ಒಂದು ವರ್ಷದಿಂದ ಕಾಮಗಾರಿಗೆ ವೇಗ ದೊರೆತ ಹಿನ್ನೆಲೆಯಲ್ಲಿ ಈಗ ಶೇ.85 ಪೂರ್ಣಗೊಂಡಿದೆ. ಕೆಲ ಭಾಗಗಳಲ್ಲಿ ಬಂಡೆಗಳು ಸಿಕ್ಕ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುತ್ತಾರೆ ಯುಜಿಡಿ ಅಧಿಕಾರಿಗಳು.
ಹೇಗಿದೆ ಯುಜಿಡಿ ಕಾಮಗಾರಿ
ಪಟ್ಟಣದ 23 ವಾರ್ಡ್ಗಳಲ್ಲಿ 35.76 ಕೋಟಿ ರೂ. ವೆಚ್ಚದಲ್ಲಿ 64 ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಒಟ್ಟು 2350 ಆಳಗುಂಡಿ ನಿರ್ಮಿಸಲಾಗಿದೆ. 6 ವರ್ಷಗಳಲ್ಲಿ ಶೇ.85 ಕಾಮಗಾರಿ ಪೂರ್ಣಗೊಂಡಿದ್ದು, ಶೇ.15ರಷ್ಟು ಅಂದರೆ 660 ಮೀಟರ್ ಕಾಮಗಾರಿ ಬಾಕಿ ಇದೆ. ಕಳೆದ ವರ್ಷ ಡಿಸೆಂಬರ್ 24ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಂಬಂಧಪಟ್ಟ ಇಂಜಿನಿಯರ್ ಮಾಹಿತಿ ನೀಡಿದ್ದರು. ಆದರೆ ಮೇ ಅಂತ್ಯಕ್ಕೆ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಅಗಸರ ಹೊಳೆ ಸಮೀಪದ ಸೇತುವೆ ಬಳಿ ಕಾಮಗಾರಿ ನಡೆಸುತ್ತಿರುವ ಸ್ಥಳಗಳಲ್ಲಿ ಕಲ್ಲಿನ ದೊಡ್ಡ ಬಂಡೆ ಸಿಕ್ಕಿದ್ದು, ಈ ಬಂಡೆಯನ್ನು ಕೊರೆದು ಪೈಪ್ಲೈನ್ ಅಳವಡಿಸಲು ವಿಳಂಬವಾಗುತ್ತಿದೆ. 5 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. -ಅರುಣ್ ಕುಮಾರ್, ಯುಜಿಡಿ ಇಂಜಿನಿಯರ್ ಸಚಿವ ರಾಜಣ್ಣ ಅವರು ಯುಜಿಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸೂಚಿಸಿದ್ದು, ಸಂಬಂಧಪಟ್ಟವರನ್ನು ಕರೆದು ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ. -ಲಾಲಾಪೇಟೆ ಮಂಜುನಾಥ್, ಪುರಸಭೆ ಅಧ್ಯಕ್ಷ ಮಧುಗಿರಿ