ಗೀತೆ ಅಧ್ಯಯನದಿಂದ ಜ್ಞಾನವೃದ್ಧಿ, ಸತ್ಯದ ಅರಿವು

KMT Geeta
Published on

ಕುಮಟಾ: ಜಗತ್ತಿನಲ್ಲಿ ಇನ್ಯಾವುದೇ ಗ್ರಂಥ ತೋರಿಸದ ಜೀವನ ಮೌಲ್ಯಗಳನ್ನು ಭಗವದ್ಗೀತೆ ನೀಡಿದೆ. ಭಗವದ್ಗೀತೆಯಲ್ಲಿ ಭಕ್ತಿ, ಕರ್ಮ, ಜ್ಞಾನ, ಯೋಗ ಸಿದ್ಧಾಂತ ಅಡಕವಾಗಿದೆ. ಗೀತೆಯ ಅಧ್ಯಯನದಿಂದ ಜ್ಞಾನವೃದ್ಧಿ, ಸತ್ಯದ ಅರಿವು ಹಾಗೂ ನಿಸ್ವಾರ್ಥ ಪ್ರಾಮಾಣಿಕತೆಯ ಮಹತ್ವದ ದರ್ಶನವಾಗುತ್ತದೆ ಎಂದು ತಾಪಂ ಇಒ ರಾಜೇಂದ್ರ ಭಟ್ಟ ಹೇಳಿದರು.

ತಾಲೂಕಿನ ಸಿವಿಎಸ್​ಕೆ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಬ್ರಹ್ಮಾಂಡದ ರಹಸ್ಯ ಅರಿಯಲಾಗದಿದ್ದರೂ ಅಗೋಚರ ಶಕ್ತಿಯ ಅರಿವು ನಮಗಿದೆ. ಸತ್ಯದ ಶೋಧನೆ ಭಗವದ್ಗೀತೆಯಲ್ಲಿದೆ. ಜ್ಞಾನಕ್ಕಿಂತ ಮಿಗಿಲಾದ, ಪರಿಶುದ್ಧವಾದ ವಸ್ತು ಈ ಪ್ರಪಂಚದಲ್ಲಿ ಬೇರೆ ಇಲ್ಲ. ಅಂತರಂಗ ಬಹಿರಂಗ ಶುದ್ಧಗೊಳಿಸುವ ಭಗವದ್ಗೀತೆಯನ್ನು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಿ. ಅದು ಅರ್ಥವನ್ನು ತನ್ನಿಂದತಾನೇ ಕಲಿಸುತ್ತದೆ ಎಂದರು.

ಭಗವದ್ಗೀತಾ ಸಮಿತಿಯ ಜಿಲ್ಲಾಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಭಗವದ್ಗೀತೆಯು ಸಾರ್ವಕಾಲಿಕ ಶಕ್ತಿ ಮತ್ತು ವಿವೇಕದ ಮೂಲ. ಗೀತೆಯು ಕೇವಲ ಪವಿತ್ರ ಗ್ರಂಥವಲ್ಲ, ಮಾನವಕುಲಕ್ಕೆ ಶಾಶ್ವತವಾಗಿ ಸಂದೇಶದ ಸಜೀವ ಧ್ವನಿಯಾಗಿದೆ. ಬಲ, ಸ್ಪೂರ್ತಿ, ಧರ್ಮಮಾರ್ಗ, ಸದಾಚಾರ ಮತ್ತು ಅಧರ್ಮದ ವಿರೋಧ, ಗೊಂದಲ ನಿವಾರಣೆಗೆ ಮಾರ್ಗದರ್ಶನವಿದೆ. ನಮ್ಮ ಎಲ್ಲ ಸಮಸ್ಯೆಯ ಪರಿಹಾರಕ್ಕೆ ಭಗವದ್ಗೀತೆ ಅಧ್ಯಯನವೊಂದೇ ಸಾಕು ಎಂದರು.

ಭಗವದ್ಗೀತಾ ಸಮಿತಿಯ ತಾಲೂಕಾಧ್ಯಕ್ಷ ಎಂ.ಆರ್ ಉಪಾಧ್ಯಾಯ ಮಾತನಾಡಿ, ವಿದ್ಯಾರ್ಥಿಗಳು ಅಯೋಮಯವಾದ ಮನಸ್ಥಿತಿಯಿಂದ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಗವದ್ಗೀತೆ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಎಂದರು.

ಸಮಿತಿ ಸಂಚಾಲಕ ಆನಂದು ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಭಟ್ಟ ಒಂಬತ್ತನೇ ಅಧ್ಯಾಯವನ್ನು ಬೋಧಿಸಿದರು. ಉಪಾಧ್ಯಕ್ಷೆ ಸುಧಾ ಶಾನಭಾಗ, ಮುಖ್ಯ ಶಿಕ್ಷಕಿ ಸುಮಾ ಪ್ರಭು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗಣೇಶ ಜೋಶಿ ವಂದಿಸಿದರು. ಆದರ್ಶ ರೇವಣಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net