

ಶನಿವಾರಸಂತೆ: ತಂದೆಯಿಂದ ಬಳುವಳಿಯಾಗಿ ಬಂದ 10 ಎಕರೆ ಜಮೀನಿನಲ್ಲಿ ಕೃಷಿಕ ಟಿ.ಆರ್.ಕೃಷ್ಣೇಗೌಡ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯ ಕಂಡುಕೊಂಡಿದ್ದು, ಯಶಸ್ವಿ ಕೃಷಿಕನಾಗಿ ಇತರರಿಗೆ ಮಾದರಿಯಾಗಿದ್ದಾರೆ.
ತಾಳೂರು ಗ್ರಾಮದ ನಿವಾಸಿ ಟಿ.ಆರ್.ಕೃಷ್ಣೇಗೌಡ ತಮ್ಮ ಜಮೀನಿನಲ್ಲಿ ಕಾಫಿ, ಅಡಕೆ, ಕಾಳುಮೆಣಸು, ಕಿತ್ತಳೆ, ತೆಂಗು, ಬಟರ್‌ಫ್ರೂಟ್, ಸಪೋಟ, ಶುಂಠಿ ಬೆಳೆಯುತ್ತಿದ್ದಾರೆ. ಇದರೊಂದಿಗೆ ಅರೇಬಿಕಾ, ರೋಬಸ್ಟಾ ಕಾಫಿಯನ್ನೂ ಬೆಳೆಯಲಾಗಿದ್ದು, ರೋಬಸ್ಟಾ ಎಕರೆಗೆ 15 ರಿಂದ 25 ಚೀಲ ದೊರೆತರೆ, ಅರೇಬಿಕಾ ಎಕರೆಗೆ ಸುಮಾರು 13ರಿಂದ 16 ಚೀಲ ಕೊಯ್ಯುತ್ತಾರೆ. ಕಾಫಿ ತೋಟದ ನಡುವೆ ಇರುವ ಕಾಡು ಹಾಗೂ ಸಿಲ್ವರ್ ಮರಗಳಿಗೆ ಕಾಳುಮೆಣಸು ತಳಿಗಳಾದ ಪಣಿಯೂರು 1, ಪಣಿಯೂರು 2, ಕರಿಮುಂಡ, ಐಐಎಸ್‌ಆರ್ ಹಾಗೂ ತೇಮಮ್ಮ ಎಂಬ ತಳಿ ಹಬ್ಬಿಸಿದ್ದಾರೆ.
ನಿಗದಿತ ಸಮಯಕ್ಕೆ ಸ್ಪ್ರೇ, ಪೋಷಕಾಂಶ ಮಿಶ್ರಣ, ಸಿಂಪಡಣೆ, ಸುಣ್ಣ, ಮರಗಸಿ, ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಆಗಬೇಕು. ಕಾಳುಮೆಣಸು ಕೊಯ್ಲಿಗೂ ಮುನ್ನ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಳ್ಳಿಗಳ ಬುಡಕ್ಕೆ ನೀರು ಹಾಯಿಸಬೇಕು. ಮಾರ್ಚ್‌ನಲ್ಲಿ ಮಳೆ ಬರುವುದರಿಂದ ಕಾಳಿನ ಗಾತ್ರಗಳು ಹೆಚ್ಚಾಗಿ ಅಧಿಕ ಇಳುವರಿ ಪಡೆಯಬಹುದು ಎನ್ನುತ್ತಾರೆ ತಾಳೂರು ಕೃಷ್ಣೇಗೌಡ. ಕಾಳುಮೆಣಸು 40 ರಿಂದ 45 ಅಡಿ ಎತ್ತರವಿದ್ದು, ಒಂದು ಎಕರೆಗೆ 200 ರಿಂದ 300 ಕೆಜಿ ಇಳುವರಿ ಪಡೆಯುತ್ತಿದ್ದಾರೆ.
ಅಡಕೆಯಿಂದಲೂ ಉತ್ತಮ ಆದಾಯ ಗಳಿಸಬಹುದೆಂಬ ಹಿನ್ನೆಲೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಅಡಕೆ ಗಿಡ ನೆಟ್ಟಿದ್ದಾರೆ. ಈ ನಡುವೆ ಕಾಫಿ ತೋಟದೊಳಗೆ ಪ್ರತ್ಯೇಕ ಕೊಳವೆಬಾವಿ ಕೊರೆಸಲಾಗಿದೆ. ಕಾಫಿ, ಕಾಳುಮೆಣಸು, ಅಡಕೆಗೆ ನೀರು ಹಾಯಿಸಲು ಮೈಕ್ರೋ ಮಾದರಿಯಲ್ಲಿ ನೀರು ಹಾಯಿಸುವ ತಂತ್ರಗಾರಿಕೆಯನ್ನು ಕಂಡುಕೊಂಡಿದ್ದಾರೆ. ಕಾಫಿ ತೋಟದೊಳಗೆ ಕಿತ್ತಳೆ, ತೆಂಗು, ಬಟರ್ ಫ್ರೂಟ್, ಪಪ್ಪಾಯ, ಸಪೋಟ ಬೆಳೆದಿದ್ದಾರೆ. ಭತ್ತ ಬೆಳೆಯುವ ಆಸಕ್ತಿ ಇವರಿಗಿದ್ದು, ಒಂದು ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಇದರೊಂದಿಗೆ ಮನೆ ಮುಂಭಾಗ ಮನೆ ಬಳಕೆಗೆ ಆಗುವಷ್ಟು ತರಕಾರಿ ಬೆಳೆಯನ್ನೂ ಬೆಳೆದುಕೊಳ್ಳುತ್ತಾರೆ.
ಕಾಳುಮೆಣಸು ನರ್ಸರಿ ಮಾಡಿಕೊಂಡಿರುವ ಕೃಷ್ಣೇಗೌಡ, ಕಾಡುಮಣ್ಣು, ದನದ ಗೊಬ್ಬರವನ್ನು ಮಿಶ್ರಣ ಮಾಡಿ ಪಾಲಿಥೀನ್ ಕವರ್‌ನಲ್ಲಿ ತುಂಬಿಸಿ 3 ಗೇಣು ಇರುವ ಮೆಣಸು ಬಳ್ಳಿಯಲ್ಲಿ 2 ಗೇಣನ್ನು ಒಳಗೆ 1 ಗೇಣನ್ನು ಹೊರಗೆ ಬಿಟ್ಟು ನಂತರ ಶೆಡ್ ನೆಟ್ ಬಳಸಿ ಕವರ್ ಮಾಡುತ್ತಾರೆ. ಆ ಮೂಲಕ ಶೇ.75ರಷ್ಟು ಬಳ್ಳಿಗಳನ್ನು ಉಳಿಸಿಕೊಳ್ಳಲಾಗುತ್ತಿದೆ. ಮಾರ್ಚ್, ಏಪ್ರಿಲ್ನಲ್ಲಿ ನರ್ಸರಿ ಮಾಡಿ ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್‌ನಲ್ಲಿ ಒಂದು ಮರದ ಬುಡಕ್ಕೆ 3- 4 ಬಳ್ಳಿಗಳನ್ನು ನೆಟ್ಟಿದ್ದರು. ಪರಿಣಾಮ ನೆಲದಲ್ಲಿ ಹರಡಿರುವ ಆರೋಗ್ಯ ಬಳ್ಳಿಗಳನ್ನು ಮೂರು ಅಡಿ ಕತ್ತರಿಸಿ ನೆಡುವ ಮೂಲಕ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಪತಿಯ ಕೃಷಿ ಕಾರ್ಯಕ್ಕೆ ಪತ್ನಿ ಸುಭದ್ರಾ ಹಾಗೂ ಪುತ್ರ ಪುನೀತ್ ಕೈ ಜೋಡಿಸಿದ್ದಾರೆ. ಕೃಷ್ಣೇಗೌಡ ಅವರಿಗೆ ಇಬ್ಬರು ಪುತ್ರರಿದ್ದು, ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಪೈಕಿ ಒಬ್ಬ ಪುತ್ರ ಪುನೀತ್ ತಾಳೂರು ಊರಿಗೆ ಹಿಂದಿರುಗಿದ್ದು, ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ಪುನೀತ್ ಪ್ರತ್ಯೇಕವಾಗಿ ಸುಂಟಿ ಬೆಳೆ ಬೆಳೆಯುತ್ತಿದ್ದಾರೆ.
ನಿತ್ಯ ಮುಂಜಾನೆ 5 ಗಂಟೆಗೆ ಕಾಯಕ ಪ್ರಾರಂಭ ಮಾಡುವ ಕೃಷ್ಣೇಗೌಡ ರಾತ್ರಿ 10 ಗಂಟೆವರೆಗೂ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಪುತ್ರ ಪುನೀತ್ ತಂದೆಯ ಕಾರ್ಯಕ್ಕೆ ಹೆಗಲಾಗಿದ್ದಾರೆ. ಕೃಷಿಯನ್ನು ಇಷ್ಟಪಟ್ಟು ಮಾಡಿದರೆ ನಷ್ಟವಾಗುವುದಿಲ್ಲ. ಕಾಫಿ ತೋಟವಿದ್ದರೂ ಉದ್ಯೋಗಕ್ಕಾಗಿ ಯುವ ಸಮೂಹ ಬೇರೆಡೆಗೆ ತೆರಳುತ್ತಿದೆ. ಈ ಪ್ರವೃತ್ತಿಯನ್ನು ಬಿಡಬೇಕು. ಹೊಲ, ಗದ್ದೆ, ತೋಟಗಳಿದ್ದರೆ ಅದನ್ನೇ ಅಭಿವೃದ್ಧಿಪಡಿಸಬೇಕು. ಕೆಲಸವನ್ನು ಯಾವುದೋ ಸಮಯಕ್ಕೆ ಮಾಡದೆ ಸಮಯಕ್ಕೆ ಸರಿಯಾಗಿ ಮಾಡಬೇಕು. ಕೃಷಿ ಎಂದಿಗೂ ನಷ್ಟವಲ್ಲ ಎನ್ನುತ್ತಾರೆ ಪುನೀತ್ ತಾಳೂರು.
ಕಾರ್ಮಿಕರ ವೇತನ, ರಸಗೊಬ್ಬರ ಬೆಲೆ ಏರಿಕೆ, ಹವಾಮಾನ ವೈಪರೀತ್ಯದಿಂದಾಗಿ ಕೃಷಿ ದುಸ್ತರವಾಗುತ್ತಿದೆ. ಆದರೂ ಸಹ ಧೃತಿಗೆಡದೆ ಸರಳ ಜೀವನ ನಡೆಸಿದರೆ ಕೃಷಿ ಎಲ್ಲ ವೃತ್ತಿಗಿಂತ ಒಳ್ಳೆಯದು. ಬೆಳೆಗಾರರು ಕಾರ್ಮಿಕರೊಂದಿಗೆ ಕೈಜೋಡಿಸಬೇಕು. ಕಾಫಿ ತೋಟದ ಕೆಲಸಗಳಿಗೆ ನುರಿತ ಕೆಲಸಗಾರರ ಅವಶ್ಯವಿದೆ. ನಾನು ನಮ್ಮ ತೋಟವನ್ನು ಅಭಿವೃದ್ಧಿಸಬೇಕೆಂದು ಪಣ ತೊಟ್ಟು ಕೆಲಸ ಮಾಡಿದೆ. ಇದರಿಂದ ಉತ್ತಮ ಆರೋಗ್ಯ ಸೇರಿದಂತೆ ನೆಮ್ಮದಿಯ ಬದುಕು ನಮ್ಮದಾಗಿದೆ. ಸರಿಯಾದ ಸಮಯಕ್ಕೆ ಎಲ್ಲ ಕೆಲಸಗಳನ್ನು ಮಾಡಿದರೆ ನಷ್ಟವಾಗುವುದಿಲ್ಲ.
ಟಿ.ಆರ್.ಕೃಷ್ಣೇಗೌಡ ತಾಳೂರು
ಸಮಯಕ್ಕೆ ಸರಿಯಾಗಿ ಕೆಲಸ ಮಾಡಬೇಕು. ಕಾಫಿ ತೋಟ ಹಾಗೂ ಗದ್ದೆಯಲ್ಲಿ ನೀರಿನ ವ್ಯವಸ್ಥೆ ಇರಬೇಕು. ಇದರಿಂದ ಉತ್ತಮ ಆದಾಯ ಗಳಿಸಬಹುದು. ಮೈಕ್ರೋ ಮಾದರಿಯಲ್ಲಿ ತೋಟಕ್ಕೆ ನೀರು ಹಾಯಿಸಲು ವ್ಯವಸ್ಥೆ ಮಾಡಲಾಗಿದೆ. ನನಗೆ ಕೃಷಿಯಲ್ಲಿ ಆಸಕ್ತಿ ಇದ್ದು ವಿವಾಹವಾದ ನಂತರ ಇದನ್ನು ಮಾಡಲು ಇಲ್ಲಿ ಅವಕಾಶ ಸಿಕ್ಕಿತು. ಅದನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ.
ಸುಭದ್ರಾ ಕೃಷ್ಣೆಗೌಡರ ಪತ್ನಿ
ಕೃಷಿಯಲ್ಲಿ ಆರೋಗ್ಯ ಮತ್ತು ನೆಮ್ಮದಿ ಸಿಗುತ್ತದೆ ಎಂಬ ಕಾರಣಕ್ಕಾಗಿ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಬೇರೆಯವರ ಹೊಲವನ್ನು ಗುತ್ತಿಗೆಗೆ ಪಡೆದು ನಾನೇ ಸುಮಾರು 200 ಚೀಲ ಶುಂಠಿ ಬೆಳೆದಿದ್ದೇನೆ. ಇದರಿಂದ ಉತ್ತಮ ಆದಾಯ ಬಂದಿದೆೆ. ಯುವ ಜನಾಂಗ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ಇದರಿಂದಲೂ ಬದುಕು ಸಾಗಿಸಬಹುದಾಗಿದೆ. ಕೃಷಿ ಭೂಮಿಯನ್ನು ಪಾಳು ಬಿಟ್ಟು ಬೇರೆ ಬೇರೆ ನಗರಗಳಿಗೆ ಉದ್ಯೋಗ ಅರಸಿ ತೆರಳುವುದನ್ನು ಬಿಡಬೇಕು.
ಪುನೀತ್ ತಾಳೂರು ನಿವಾಸಿ