

ಸಿದ್ದಾಪುರ: ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು, ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಮುಂತಾದ ತತ್ವ - ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿಸುತ್ತದೆ ಎಂದು ನಾಟ್ಯಾಚಾರ್ಯ ಶಂಕರ ಭಟ್ಟ ಹೇಳಿದರು.
ಪಟ್ಟಣದ ಶ್ರೀ ಬೊಮ್ಮೇಶ್ವರ ಯಕ್ಷಗಾನ ಕಲಾಕೇಂದ್ರ ಹಾಗೂ ಯಕ್ಷ ತರಂಗಿಣಿ ಹಾರ್ಸಿಕಟ್ಟಾ ಸಹಯೋಗದಲ್ಲಿ ಶಂಕರಮಠದಲ್ಲಿ ಏರ್ಪಡಿಸಲಾಗಿದ್ದ ಸಂಸ್ಥೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತಾಡಿದರು. ಯಕ್ಷಗಾನ ಕಲೆ ಬೆಳೆಯ ಬೇಕಿದ್ದರೆ ಅದನ್ನು ಅಭ್ಯಾಸ ಮಾಡಿ ಪ್ರಸಾರ ಮಾಡುವ ಕಲಾವಿದರು ಹಾಗೂ ನೋಡಿ ಪ್ರೋತ್ಸಾಹಿಸುವ ಪ್ರೇಕ್ಷಕ ವರ್ಗ ಎರಡೂ ಮುಖ್ಯವಾಗಿದೆ. ಅಧ್ಯಯನ ಮಾಡಿದ ಮಕ್ಕಳಿಗೆ ರಂಗಪ್ರವೇಶ ಹೆಚ್ಚಿನ ಕಲಿಕೆಗೆ ಪ್ರೇರಣೆಯಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಕನ್ನೇಶ ಕೋಲಸಿರ್ಸಿ, ವಿಜಯಾ ಹೆಗಡೆ, ಮುಖ್ಯ ಶಿಕ್ಷಕಿ ವಿಜಯಾ ನಾಯ್ಕ, ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕದೊಂದಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಲೋಕೇಶ ಅಪ್ಪಿನಬೈಲ್, ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ, ನಂದನ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಕಲಿಕಾ ವಿದ್ಯಾರ್ಥಿಗಳ ಜತೆಗೆ ಜೈ ಕುಮಾರ ಎಸ್. ನಾಯ್ಕ ಹಾಗೂ ಶೋಭಾ ಸತ್ಯನಾರಾಯಣ ಸಂಗಡಿಗರಿಂದ ‘ಮಹಿಷಾಸುರ ವಧೆ’ ಯಕ್ಷಗಾನ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಕೃಷ್ಣ ಮರಾಠಿ ಕಲಬೆ, ಭಾರ್ಗವ ಹೆಗಡೆ ಮುಂಡಿಗೆಸರ, ನಾರಾಯಣ ಗುಡ್ಡೆಕಣ, ಗಣೇಶ ಹೆಗಡೆ ಕೆರೆಕೈ ಸಹಕರಿಸಿದರು. ಎಂ.ಆರ್ .ನಾಯ್ಕ ಕರ್ಸೆಬೈಲ್ ವೇಷಭೂಷಣ ಹಾಗೂ ರಂಗಸಜ್ಜಿಗೆ ಒದಗಿಸಿದ್ದರು.