

ಮೈಸೂರು: ಇಂದಿನ ಯುವಕರಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಸಕಾರಾತ್ಮಕತೆಗೆ ಆಧಾರ ಆಧ್ಯಾತ್ಮಿಕತೆಯಾಗಿದೆ. ಅಧ್ಯಾತ್ಮ ಯುವಜನರಲ್ಲಿ ಮನೋಬಲವೃದ್ಧಿಸಿ ಸುಖಮಯ ಸಮಾಜವನ್ನು ಸ್ಥಾಪಿಸುತ್ತದೆ ಎಂದು ಅಬು ಪರ್ವತದಿಂದ ಆಗಮಿಸಿರುವ ಅಂತಾರಾಷ್ಟ್ರೀಯ ಮನೋಬಲ ತರಬೇತುದಾರ ರಾಜಯೋಗಿ ಬ್ರಹ್ಮಾಕುಮಾರ ಶಕ್ತಿರಾಜ್ ಅಭಿಪ್ರಾಯಪಟ್ಟರು.
ಹುಣಸೂರು ರಸ್ತೆಯ ಜ್ಞಾನ ಸರೋವರ ರಾಜಯೋಗ ಸಂಸ್ಥೆಯಲ್ಲಿ ಸೋಮವಾರ ಐದು ದಿನಗಳ ವ್ಯಕ್ತಿತ್ವ ವಿಕಸನ ಮೌನ ಭಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛ ಮತ್ತು ಆರೋಗ್ಯ ಸಮಾಜಕ್ಕಾಗಿ ಆಧ್ಯಾತ್ಮಿಕ ಸಶಕ್ತೀಕರಣ ಬಹಳ ಅವಶ್ಯಕ. ಆಧ್ಯಾತ್ಮಿಕ ಸಂಪನ್ನ ಮತ್ತು ಸಂಪೂರ್ಣತೆಯ ಜೀವನಕ್ಕಾಗಿ ತಮ್ಮನ್ನು ತಾವು ವಿಶ್ವ ಕಲ್ಯಾಣದ ಸೇವೆಯಲ್ಲಿ ತೊಡಗಿಸಿಕೊಳ್ಳಲು ತುಂಬ ಅವಶ್ಯಕವಾಗಿದೆ. ದುಃಖವನ್ನು ಯಾರಿಗೂ ಕೊಡಬಾರದು. ದುಃಖವನ್ನು ಕೊಟ್ಟರೆ ದುಃಖದಿಂದ ಸಾಯಬೇಕಾಗುತ್ತದೆ. ಸುಖವನ್ನು ಕೊಡುವುದರಿಂದ ಎಲ್ಲರಿಂದ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂದರು.
ಮೈಸೂರು ಉಪ ವಲಯದ ಈಶ್ವರೀಯ ವಿಶ್ವ ವಿದ್ಯಾಲಯಗಳ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀ ಮಾತನಾಡಿ, ಬ್ರಹ್ಮಾಕುಮಾರ ಶಕ್ತಿರಾಜ್ ಅವರು ಪ್ರೇರಣದಾಯಕ ಭಾಷಣಕಾರರಾಗಿ ಪ್ರಖ್ಯಾತರಾಗಿದ್ದಾರೆ. ಶ್ರೀಯುತರು ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಪರ್ಯಟನೆ ಮಾಡಿ ಭಾರತೀಯ ಸಂಸ್ಕೃತಿಯ ಮತ್ತು ಆಧ್ಯಾತ್ಮದ ಸೊಗಡನ್ನು ಅವರ ಪ್ರೇರಣಾದಾಯಕ ಮಾತುಗಳಿಂದ ಪಸರಿಸುತ್ತಾ ಜನರಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಮಹಾನಗರಕ್ಕೆ ಆಗಮಿಸಿ ನಮ್ಮ ಬ್ರಹ್ಮಾಕುಮಾರ, ಬ್ರಹ್ಮಾಕುಮಾರಿಯರಿಗೆ ಪ್ರೇರಣೆ ನೀಡುತ್ತಿರುವುದು ನಮ್ಮ ಸೌಭಾಗ್ಯ ಎಂದರು.
ಅಲ್ಲದೆ ಅವರು ಭಾರತೀಯ ಕ್ರಿಕೆಟ್ ತಂಡ ಮತ್ತು ಐಪಿಎಲ್ ತಂಡಗಳಿಗೆ ಮನೋಬಲದ ಮಹತ್ವ ಮತ್ತು ಧ್ಯಾನದ ವಿಧಾನಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟರು ಮತ್ತು ಟಿವಿ ನಟರಿಗೂ ಈ ರೀತಿಯ ತರಬೇತಿ ನೀಡುತ್ತಿದ್ದಾರೆ. ಜತೆಗೆ ಅನೇಕ ರಾಜ್ಯಗಳ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ರಿಲ್ಯಾಕ್ಷೇಷನ್ ತರಬೇತಿ ನೀಡುತ್ತಿದ್ದಾರೆ. ಹಾಗೆಯೇ ವಿಭಿನ್ನ ವಯೋಮಾನದ 12 ಲಕ್ಷಕ್ಕೂ ಹೆಚ್ಚಿನ ಜನರಿಗೆ ಉಚಿತ ಧ್ಯಾನದ ಪರಿಚಯ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಳೆದ 30 ವರ್ಷಗಳಿಂದ ರಾಜಯೋಗ ಅಭ್ಯಾಸ ಮಾಡುತ್ತಿರುವ ಶಕ್ತಿರಾಜ್ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ರಂಗನಾಥ್‌ಶಾಸ್ತ್ರಿ, ಶಾರದಾ, ಪ್ರಾಣೇಶ್, ನಾಗರಾಜ್, ಧನಲಕ್ಷ್ಮೀ ಇತರರಿದ್ದರು.