ಶ್ರೀಪಾದರಾಜರ ಸ್ಮರಣೆಯಿಂದ ಜ್ಞಾನವೃದ್ಧಿ

9 mbl 1
Published on

ಮುಳಬಾಗಿಲು: ಅಸಂಖ್ಯ ಜನ್ಮಗಳನ್ನು ಮುಗಿಸಿ ಮನುಷ್ಯನಾಗಿ ಹುಟ್ಟಿದ್ದೇ ಈ ಜನನ&ಮರಣ ಚಕ್ರವನ್ನು ದಾಟಲು. ಈ ದುಸ್ಸಾಧ್ಯ ಕಾರ್ಯ ಸಾಧನೆಗೆ ಅಧ್ಯಾತ್ಮವೊಂದೇ ಮಾರ್ಗವಾಗಿದ್ದು, ಇದನ್ನು ಪಡೆಯಲು ಶ್ರೀಪಾದರಾಜರ ಸ್ಮರಣೆ, ಆರಾಧನೆ ಮಾಡಬೇಕು. ಆಗಲೇ ಜ್ಞಾನ ಪ್ರಜ್ವಲಿಸುತ್ತದೆ ಎಂದು ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳು ತಿಳಿಸಿದರು.

ನಗರ ಹೊರವಲಯದ ನರಸಿಂಹತೀರ್ಥದ ಶ್ರೀಪಾದರಾಜರ ಮಠದಲ್ಲಿ ಸೋಮವಾರ ಶ್ರೀಪಾದರಾಜರ ವಾರ್ಷಿಕ ಪೂರ್ವಾರಾಧನೆ ಮಹೋತ್ಸವ ಉದ್ಘಾಟಿಸಿ, ಆಶೀರ್ವಚನ ನೀಡಿದ ಅವರು, ಈ ಬಾರಿ ಆರಾಧನೆ ಅಂಗವಾಗಿ ಒಂದು ತಿಂಗಳಿಂದ ನಡೆಸಿಕೊಂಡು ಬರುತ್ತಿರುವ ಜ್ಞಾನಯಜ್ಞ ಮಹತ್ವದಿಂದ ಕೂಡಿದೆ. ಇದರಿಂದ ಆಧ್ಯಾತ್ಮಿಕ ಪಂಡಿತರಿಂದ ಹಲವು ವಿಷಯಗಳು ಪ್ರವಚನ ಮಾಲಿಕೆಗಳ ಮೂಲಕ ಪ್ರಚುರಗೊಂಡಿವೆ ಎಂದರು.

ಶ್ರೀಪಾದರಾಜ ಮಠದ ಪೀಠಾಧ್ಯಕ್ಷ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳು ಮಾತನಾಡಿ, ಭಗವಂತನ ಅಮೃತತ್ವ ಪಡೆಯಲು ಜ್ಞಾನಮಾರ್ಗ ಅತಿ ಮುಖ್ಯ. ತಮೇವಂ ವಿದ್ವಾನ್​ ಅಮೃತ ಇಹ ಭವತಿ ಎಂದೇ ಶೃತಿ ಸಾರುತ್ತಿದೆ ಎಂಬ ಶ್ರೀ ಮಧ್ವಾಚಾರ್ಯರ ನಿಲುವನ್ನು ಸಾಕಾರಗೊಳಿಸಲು ಶ್ರೀಪಾದರಾಜರು ಸಕಲಶಾಸ್ತ್ರದ ಸಾಲುಗಳನ್ನು ಕನ್ನಡಿಕರಿಸಿದ್ದರು. ಆದುದರಿಂದ ಈ ಬಾರಿಯ ಶ್ರೀಪಾದರಾಜರ ಆರಾಧನೋತ್ಸವವನ್ನು ಜ್ಞಾನಯಜ್ಞದ ರೂಪದಲ್ಲಿ ಸಾರ್ಥಕವಾಗಿಸಲಾಗಿದೆ ಎಂದರು.

ಇಂದು ರಥೋತ್ಸವ

ಶ್ರೀ ಯೋಗಾನರಸಿಂಹದೇವರ, ಹನುಮ ದೇವರ, ಶ್ರೀಪಾದರಾಜರ ರಥೋತ್ಸವಕ್ಕೆ ಶ್ರೀಮಠ ಸಜ್ಜುಗೊಂಡಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುದೇಂದ್ರತಿರ್ಥ ಶ್ರೀಪಾದಂಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಳಬಾಗಿಲಿನ ನರಸಿಂಹ ತೀರ್ಥದ ಶ್ರೀಪಾದರಾಜರ ಮಠದ ಪೀಠಾಧಿಪತಿ ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳು ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net