ವಿಶೇಷ ಅನುದಾನಕ್ಕೆ ಬೇಡಿಕೆ

kpp pp meet
ಕೊಪ್ಪ ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. ಗಾಯತ್ರಿ ಎ. ಶೆಟ್ಟಿ, ಚಂದ್ರಕಾಂತ್, ಇಸ್ಮಾಯಿಲ್ ಇತರರಿದ್ದರು.
Published on

ಕೊಪ್ಪ: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಆದ್ಯತೆ ಕೊಟ್ಟು, ಸರ್ಕಾರದಿಂದ ವಿಶೇಷ ಅನುದಾನ ಕೋರಿ ಶಾಸಕ ಟಿ.ಡಿ.ರಾಜೇಗೌಡ ಅವರ ಬಳಿ ನಿಯೋಗ ತೆರಳಲು ಪಟ್ಟಣ ಪಂಚಾಯಿತಿ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

ಗುರುವಾರ ಪಪಂನಲ್ಲಿ ವಿವಿಧ ಕಾಮಗಾರಿಗಳಿಗೆ ಕ್ರಿಯಾಯೋಜನೆ, ಟೆಂಡರ್‌ಗಳಿಗೆ ಅನುಮೋದನೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ ತುರ್ತು ಸಭೆ ನಡೆಯಿತು. ರಸ್ತೆಗಳು ಹಾಳಾಗಿರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯ ಕೆ.ಸಂದೇಶ್ ಹೇಳಿದರು. 6 ತಿಂಗಳಲ್ಲಿ ಎರಡು ಬಾರಿ ರಸ್ತೆಗಳಲ್ಲಿ ಗುಂಡಿಬಿದ್ದಿವೆ. ಪಪಂ ಮಾಜಿ ಅಧ್ಯಕ್ಷರ ಮನೆ ಮುಂದೆಯೇ ರಸ್ತೆ ಗುಂಡಿ ಬಿದ್ದಿದೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂದು ಸದಸ್ಯರು ಆಕ್ಷೇಪಿಸಿದರು. ಪಪಂ ಸಿಬ್ಬಂದಿ ರಾಜೇಶ್ ಮಾತನಾಡಿ, ಕಾಂಕ್ರೀಟ್ ರಸ್ತೆ ಮೇಲೆ ಡಾಂಬರು ಹಾಕಿದ್ದರಿಂದ ನಿಲ್ಲುತ್ತಿಲ್ಲ ಎಂದು ತಿಳಿಸಿದರು.
ಸಯ್ಯದ್ ಮಹಮ್ಮದ್ ಗೌಸ್ ಮಾತನಾಡಿ, ಟಾಕೀಸ್ ರಸ್ತೆಯಲ್ಲಿನ ಪಪಂ ಮಳಿಗೆ ದುರಸ್ತಿಗೆ ನಗರೋತ್ಥಾನದಲ್ಲಿ 20 ಲಕ್ಷ ರೂ. ಅನುದಾನ ಮೀಸಲಿಟ್ಟು ಒಂದು ವರ್ಷ ಕಳೆಯಿತು. ಮಳಿಗೆ ಹರಾಜು ನಡೆಯದೆ ಸರ್ಕಾರಕ್ಕೆ 10 ಕೋಟಿ ರೂ. ನಷ್ಟವಾಗಿದೆ. ಅದನ್ನು ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಮುಖ್ಯಾಧಿಕಾರಿ ಚಂದ್ರಕಾಂತ್ ಪ್ರತಿಕ್ರಿಯಿಸಿ, ಮಳಿಗೆ ಕೆಲಸಗಳಿಗೆ ಸಂಬಂಧಿಸಿದಂತೆ 1.30 ಕೋಟಿ ರೂ. ಲಭ್ಯವಿದ್ದು, ಸಭೆ ನಿರ್ಣಯಿಸಿದರೆ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ವಿಜಯಕುಮಾರ್ ಮಾತನಾಡಿ, ಈ ಹಿಂದೆ 3 ಸಭೆ ನಡೆಸಿ, ಎಸ್‌ಎಫ್‌ಸಿ ಹಾಗೂ ಪಟ್ಟಣ ಪಂಚಾಯಿತಿ ವಿಶೇಷ ಅನುದಾನದಡಿ ಸವಲತ್ತು ವಿತರಣೆಗೆ ಫಲಾನುಭವಿಗಳ ಆಯ್ಕೆ ಮಾಡಿದ್ದು, ಈವರೆಗೂ ಸವಲತ್ತು ವಿತರಿಸಿಲ್ಲ. ಫಲಾನುಭವಿಗಳಿಗೆ ಸವಲತ್ತು ವಿತರಿಸದೆ ಈಗ ಮತ್ತೆ ಸಭೆ ನಡೆಸುವುದಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ಚಂದ್ರಕಾಂತ್ ಮಾತನಾಡಿ, ಫಲಾನುಭವಿಗಳ ಆಯ್ಕೆ ಆಗಿದ್ದರೆ, ವಿದ್ಯಾರ್ಥಿಗಳಿಗೆ 7 ದಿನಗಳೊಳಗೆ ಚೆಕ್ ವಿತರಿಸುತ್ತೇವೆ. ಅಂಗವಿಕಲರ ಶಸ್ತ್ರಚಿಕಿತ್ಸೆಗೆ ಅನುದಾನದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ 15 ದಿನಗಳೊಳಗೆ ಮುಕ್ತಾಯಗೊಳಿಸುತ್ತೇವೆ ಎಂದು ತಿಳಿಸಿದರು.
ಸಿಬ್ಬಂದಿಯೇ ಸುಪ್ರೀಂ?
ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಸಿಬ್ಬಂದಿ ಆನಂದ್ ಅವರು ಸಭೆಗೆ ಯಾಕೆ ಬಂದಿಲ್ಲ. ನಿಮ್ಮ ಬಳಿ ಯಾವುದನ್ನೇ ಕೇಳಿದರೂ ಫೈಲ್ ಆನಂದನ ಬಳಿ ಇದೆ ಎನ್ನುತ್ತೀರಿ. ಪಟ್ಟಣ ಪಂಚಾಯಿತಿಗೆ ಆನಂದ ಸುಪ್ರೀಂ ಇದ್ದಾರಾ ಎಂದು ರಶೀದ್, ವಿಜಯಕುಮಾರ್ ಪ್ರಶ್ನಿಸಿದರು. ಸಂದೇಶ್ ಮಾತನಾಡಿ, ತಾಪಂ, ಜಿಪಂ, ಗ್ರಾಪಂಗಳಿಂದ ಕೆಲಸಗಳು ಆಗುತ್ತಿವೆ. ಪಪಂ ಕೆಲಸ ಯಾಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು. ಪಪಂನಲ್ಲಿ ಕಮಿಷನ್ ವ್ಯವಹಾರ ನಡೆಯುವುದಿಲ್ಲ. ಯಾರಾದರೂ ಸದಸ್ಯರು ಕಮಿಷನ್ ಕೇಳಿದ್ದಾರಾ ಎಂದು ಶ್ರೀನಿವಾಸ್ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ರಶೀದ್, 30 ಸಾವಿರ ರೂ. ಕಾಮಗಾರಿಗೆ 15 ಸಾವಿರ ರೂ. ನಷ್ಟು ಕಮಿಷನ್ ಕೇಳುತ್ತಾರೆ ಎಂಬ ಆರೋಪವಿದೆ ಎಂದರು. ಮುಖ್ಯಾಧಿಕಾರಿ ಚಂದ್ರಕಾಂತ್ ಮಾತನಾಡಿ, ಆನಂದ ಅವರು ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಹೋಗಿದ್ದಾರೆ ಎಂದರು. ಕಮಿಷನ್ ಕೇಳಿದ್ದು ಯಾರು ಎಂದು ಹೇಳಿದರೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ಎಂದರು. ಆಗ ಸದಸ್ಯರು, ನೀವು ಪತ್ರ ಬರೆಯುವ ಅಗತ್ಯವಿಲ್ಲ, ನಾವೇ ಬರೆಯುತ್ತೇವೆ ಎಂದರು.
ಅಧ್ಯಕ್ಷೆ ಗಾಯತ್ರಿ ವಸಂತ್, ಉಪಾಧ್ಯಕ್ಷೆ ಗಾಯತ್ರಿ ಎ. ಶೆಟ್ಟಿ, ಮೈತ್ರಾ ಗಣೇಶ್, ಎಚ್.ಆರ್.ರೇಖಾ, ಇಸ್ಮಾಯಿಲ್, ಸುಜಾತಾ, ಹೇಮಾವತಿ, ಸುಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net