ಬ್ಯಾರಿ ಲಿಪಿಯನ್ನು ಇಂಗ್ಲಿಷ್‌ ಲಿಪಿಯೊಂದಿಗೆ ಲಿಪ್ಯಂತರ ಮಾಡುವ ತಂತ್ರಜ್ಞಾನ ಲೋಕಾರ್ಪಣೆ

IMG-20210707-WA0006
Published on

ಮಂಗಳೂರು: ಮೊಬೈಲ್‌ ಹಾಗೂ ಕಂಪ್ಯೂಟರ್‌ ತಂತ್ರಜ್ಞಾನಕ್ಕೆ ಗೂಗಲ್‌ ಹಾಗೂ ಎಲ್ಲ ಬ್ರೌಸರ್‌ಗಳ ಮೂಲಕ ಹೊಂದಿಕೊಳ್ಳುವ ರೀತಿಯಲ್ಲಿ ಸಿದ್ಧಪಡಿಸಲಾದ ಬ್ಯಾರಿ ಲಿಪಿಯನ್ನು ಇಂಗ್ಲಿಷ್‌ ಲಿಪಿಯೊಂದಿಗೆ ಲಿಪ್ಯಂತರ ಮಾಡುವ ತಂತ್ರಜ್ಞಾನವನ್ನು ಬುಧವಾರ ಮಂಗಳೂರಿನ ಬ್ಯಾರಿ ಅಕಾಡೆಮಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌, ಬ್ಯಾರಿ ಭಾಷೆಗೆ ಲಿಪಿಯಿಲ್ಲ ಎನ್ನುವ ಕೊರಗು ಈಗಾಗಲೇ ದೂರವಾಗಿದೆ. ಅದರ ಮುಂದುವರಿದ ಭಾಗವಾಗಿ ಲಿಪ್ಯಂತರ ಮಾಡುವ ತಂತ್ರಜ್ಞಾನ ಲೋಕಾರ್ಪಣೆ ಮಾಡಲಾಗಿದೆ. ಯಾವುದೇ ಬ್ರೌಸರ್‌ನಲ್ಲಿ bearyscript.in ಎಂದು ಟೈಪ್‌ ಮಾಡಿ ಕ್ಲಿಕ್‌ ಮಾಡಿದರೆ, ಲಿಪಿ ಬರೆಯುವ ಪೇಜ್‌ ತೆರದುಕೊಳ್ಳುತ್ತದೆ. ಯಾವುದೇ ಭಾಷೆಯ ಜನರು, ಇಂಗ್ಲಿಷ್‌ ಲಿಪಿ ಉಪಯೋಗಿಸಿ, ತಮ್ಮ ಊರು, ಹೆಸರು, ಕಥೆ, ಕವನಗಳನ್ನು ಬರೆದರೆ ಅದು ಬ್ಯಾರಿ ಲಿಪಿಗೆ ಬದಲಾಗುತ್ತದೆ. ಯುನಿಕೋಡ್‌ ಅವಶ್ಯಕತೆ ಇಲ್ಲದೆ ಶೇ.80ರಷ್ಟು ಪದಗಳು ಬ್ಯಾರಿ ಲಿಪಿಗೆ ಬದಲಾಗುತ್ತದೆ. ಯುನಿಕೋಡ್‌ ಪಡೆಯುವ ನಿಟ್ಟಿನಲ್ಲೂ ಅಮೆರಿಕದ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದರು.
ಅಕಾಡೆಮಿ ರಿಜಿಸ್ಟ್ರಾರ್‌ ಪೂರ್ಣಿಮಾ, ಸಂತ ಅಲೋಶಿಯಸ್‌ ಕಾಲೇಜಿನ ರಿಜಿಸ್ಟ್ರಾರ್‌ ಆಲ್ವಿನ್‌ ಡೆಸಾ, ಲಿಪ್ಯಂತರ ತಂತ್ರಜ್ಞಾನ ಸಿದ್ಧಪಡಿಸಿದ ಅಲೋಶಿಯಸ್‌ ಕಾಲೇಜಿನ ವಿದ್ಯಾರ್ಥಿಗಳಾದ ಮೊಹಮ್ಮದ್‌ ಮಶ್ಫೂಕ್‌ ಹುಸೈನ್‌, ಕೆ.ಎ.ಇಸ್ಮಾಯಿಲ್‌ ಶಫೀಕ್‌, ಮೆಲ್ರಾಯ್‌ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net