

ಮಡಿಕೇರಿ:
ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ, ಮಕ್ಕಳಿಲ್ಲದ ಕಾರಣಕ್ಕೆ ಬಹುತೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎನ್ನುವ ಆತಂಕದ ವಾತಾವರಣದ ಮಧ್ಯೆ ಸರ್ಕಾರದ ಆಂಗ್ಲ ಮಾಧ್ಯಮ ಶಾಲೆಗಳು ವರ್ಷದಿಂದ ವರ್ಷಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿವೆ. ನಿಗದಿತ ಸೀಟ್‌ಗಳಿಗಿಂತ ಮೂರು ಪಟ್ಟು ಅಧಿಕ ಅರ್ಜಿಗಳು ಬರುತ್ತಿದ್ದು, ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವುದೇ ಎಸ್‌ಡಿಎಂಸಿಗಳಿಗೆ ತಲೆನೋವಾಗಿದೆ. ಕನಿಷ್ಠ ನಗರ ವ್ಯಾಪ್ತಿಗಳಲ್ಲಾದರೂ ಸರ್ಕಾರ ಹೆಚ್ಚು ಸೀಟುಗಳಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆಯ ಮಾತುಗಳು ಕೇಳಿಬರುತ್ತಿದೆ.
ಪೋಷಕರಲ್ಲಿ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ, ಇಂಗ್ಲೀಷ್ ಕಲಿತರೆ ಮಾತ್ರ ಉತ್ತಮ ಭವಿಷ್ಯ ಎನ್ನುವ ಬಲವಾದ ನಂಬಿಕೆ, ಪ್ರತಿಷ್ಠೆಯ ತೊಳಲಾಟ, ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ... ಹೀಗೆ ಹಲವು ಕಾರಣಗಳಿಂದ ಕಳೆದ 3 ದಶಕಗಳಿಂದ ಈಚೆಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಮೊದಲೆಲ್ಲಾ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಾ ಶೋಭಿಸುತ್ತಿದ್ದ ಸರ್ಕಾರಿ ಶಾಲೆಗಳು ಇಂದು ಬಿಕೋ ಎನ್ನುತ್ತಿವೆ. ಬಹುತೇಕ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದರೆ ಅದೇ ದೊಡ್ಡದು ಎನ್ನುವ ಸ್ಥಿತಿ ಇದೆ. ಇನ್ನು ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಇಲ್ಲ ಎನ್ನುವ ಕಾರಣಕ್ಕೆ ಸರ್ಕಾರಿ ಶಾಲೆಗಳೇ ಮುಚ್ಚಿಹೋಗಿವೆ.
ಇಂಥ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳ ಕಡೆಗೆ ಮತ್ತೆ ವಿದ್ಯಾರ್ಥಿಗಳನ್ನು ಸೆಳೆಯಬೇಕು, ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗೆ ಹೋಗಲಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೂ ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಭಾಷಾ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ 2019ರಲ್ಲಿ ರಾಜ್ಯಾದ್ಯಂತ 1 ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿದ್ದವು.
ದೊಡ್ಡಮಟ್ಟದ ವಿರೋಧದ ಮಧ್ಯೆಯೂ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಸಕ್ತಿ ಫಲವಾಗಿ ರಾಜ್ಯಾದ್ಯಂತ ಕನ್ನಡ ಶಾಲೆಗಳಲ್ಲೇ ಅಂಗ್ಲ ಮಾಧ್ಯಮ ಶಾಲೆಗಳನ್ನೂ ತೆರೆಯಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನಾಲ್ಕರಂತೆ ಕೊಡಗು ಜಿಲ್ಲೆಯಲ್ಲೂ 2019ರ ಜೂನ್‌ನಿಂದ 8 ಶಾಲೆಗಳು ಕಾರ್ಯಾರಂಭಿಸಿದವು. ಸರ್ಕಾರ ನಿಗದಿ ಪಡಿಸಿದ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದ್ದರೂ ಬೇಡಿಕೆ ಹೆಚ್ಚು ಇದ್ದು ಶಾಲೆಗಳಲ್ಲಿ ಸವಲತ್ತು ಇದ್ದ ಕಡೆಗಳಲ್ಲಿ 1-2 ಹೆಚ್ಚುವರಿ ಮಕ್ಕಳಿಗೆ ಶಿಕ್ಷಣ ಇಲಾಖೆ ಮೂಲಕ ಸೀಟು ಮಾಡಿಕೊಡುವ ಪ್ರಯತ್ನವೂ ನಡೆದುಕೊಂಡು ಬಂದಿದೆ.
ಕೊಡಗಿನಲ್ಲಿ ಮಡಿಕೇರಿ ತಾಲೂಕಿನ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹೊದವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಪೋಕ್ಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸÀರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು ಸÀರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ವಿರಾಜಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕುಶಾಲನಗರ ಸÀರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ನೆಲ್ಯಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಅಂದು ಶುರುವಾಗಿದ್ದವು.
ಆರಂಭದಲ್ಲಿ ಪ್ರಚಾರದ ಕೊರತೆ ಮತ್ತು ಶಾಲೆ ಆರಂಭದ ಬಗ್ಗೆ ಇದ್ದ ಕೆಲ ಗೊಂದಲಗಳಿAದ ಪೋಷಕರು ಹಿಂದೇಟು ಹಾಕಿದರೂ ಸಂಬAಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರು, ಶಿP್ಷÀಕರ ಪ್ರಯತ್ನದಿಂದಾಗಿ ಆಂಗ್ಲ ಮಾಧ್ಯಮ ತರಗತಿಗಳಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಲಾರಂಭಿಸಿತು. 2019ರಲ್ಲಿ 1ನೇ ತರಗತಿಯಿಂದ ಆರಂಭವಾದ ಆಂಗ್ಲ ಮಾಧ್ಯಮ ಈಗ 7ನೇ ತರಗತಿ ತನಕ ತಲುಪಿದೆ.
ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ವಿಶೇಷ ತರಬೇತಿ ಪಡೆದ ಶಿP್ಷÀಕರನ್ನೇ ಈ ಶಾಲೆಗಳಿಗೆ ನಿಯೋಜನೆ ಮಾಡಿರುವುದು ವಿಶೇಷ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಇಲ್ಲಿ ಪಾಠಗಳು ನಡೆಯುತ್ತಿವೆ. ಮಕ್ಕಳು ಇಂಗ್ಲೀಷ್‌ನಲ್ಲಿ ಸಂವಹನ ನಡೆಸುವಷ್ಟರ ಮಟ್ಟಿಗೆ ಆರಂಭದಲ್ಲೇ ತಯಾರು ಮಾಡುವುದು ಈ ಶಾಲೆಗಳ ವಿಶೇಷ. ಆಂಗ್ಲ ಭಾಷೆಯ ಪಠ್ಯ ಪುಸ್ತಕದಲ್ಲಿ ಇರುವ ಕಥೆ, ಕವನಗಳನ್ನು ತಮ್ಮ ಮಾತÊ ಭಾಷೆಯಲ್ಲಿ ಅರ್ಥಮಾಡಿಕೊಂಡು ಅವುಗಳನ್ನು ಇಂಗ್ಲೀಷ್‌ನಲ್ಲೂ ಹೇಳುವ ಸಾಮರ್ಥ್ಯ 1ನೇ ತರಗತಿ ವಿದ್ಯಾರ್ಥಿಯಲ್ಲಿ ಇರುವಷ್ಟರ ಮಟ್ಟಿಗೆ ಇಲ್ಲಿಯ ಪಾಠಗಳು ಪರಿಣಾಮಕಾರಿ ಆಗಿರುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಸಿಗುವ ಉಚಿತ ಸಮವಸ್ತç, ಬಿಸಿಯೂಟ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಸವಲತ್ತುಗಳೂ ಸರ್ಕಾರಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೂ ಸಿಗುತ್ತದೆ. ಹಾಗಾಗಿ ಪೋಷಕರು ಈ ಶಾಲೆಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿಯೇ ಸರ್ಕಾರ ನಿಗದಿಪಡಿಸಿದ ಸೀಟ್‌ಗಳಿಗಿಂತಲೂ ಹೆಚ್ಚಿನ ಅರ್ಜಿಗಳು ಈಗ ಎಲ್‌ಕೆಜಿ ಪ್ರವೇಶಕ್ಕೆ ಬರುತ್ತಿದೆ. ನಮ್ಮ ಮಕ್ಕಳಿಗೂ ಪ್ರವೇಶ ಕೊಡಿ ಎಂದು ಎಸ್‌ಡಿಎಂಸಿ ಮುಂದೆ ಪೋಷಕರು ದುಂಬಾಲು ಬೀಳುವ ಸ್ಥಿತಿ ಇದೆ.
ಕುಶಾಲನಗರದ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೂ ಆರಂಭದಿAದ ಭಾರಿ ಬೇಡಿಕೆ ಇದೆ. ಇಲ್ಲಿ ಕೂಡ ಉಳಿದೆಡೆಯಂತೆ ಶಾಲಾ ಪ್ರವೇಶಕ್ಕೆ 30 ಸೀಟ್‌ಗಳ ಮಿತಿ ಹಾಕಲಾಗಿದೆ. ಕುಶಾಲನಗರ ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಕುಶಾಲನಗರ ಪುರಸಭೆ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚುವರಿ ಸೀಟ್‌ಗಳ ಅವಕಾಶ ಕಲ್ಪಿಸಿಕೊಡಬೇಕು ಎಂದು ಮೊದಲಿನಿಂದಲೂ ಬೇಡಿಕೆ ಇಡಲಾಗುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿ ಈ ವರ್ಷ ಎಲ್‌ಕೆಜಿ ಪ್ರವೇಶಕ್ಕೆ 80ಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಇರುವ 30 ಸೀಟ್‌ಗಳನ್ನು ಯಾವ ಮಾನದಂಡ ಮೇಲೆ 80 ಅರ್ಜಿಗಳಲ್ಲಿ ಆಯ್ಕೆ ಮಾಡುವುದು ಎನ್ನುವುದರ ಬಗ್ಗೆ ಎಸ್‌ಡಿಎಂಸಿ ತಲೆ ಕೆಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಗಮನ ಸೆಳೆದು ಸದ್ಯದ ಪರಿಹಾರವಾಗಿ ಎಸ್‌ಡಿಎಂಸಿ ಜವಾಬ್ದಾರಿ ಮೇಲೆ ಹೆಚ್ಚುವರಿ 30 ಸೀಟ್‌ಗಳನ್ನು ಎಲ್‌ಕೆಜಿಗೆ ಮಂಜೂರು ಮಾಡಿಸಿಕೊಳ್ಳಲಾಗಿದೆ. ಇದಕ್ಕೆ ಬೇಕಿರುವ ಗೌರವ ಶಿಕ್ಷಕರ ಸಂಭಾವನೆ ಸೇರಿದಂತೆ ಇತರ ಖರ್ಚುಗಳನ್ನು ಎಸ್‌ಡಿಎಂಸಿ ವಹಿಸಿಕೊಳ್ಳಲಿದ್ದು, ಅಗತ್ಯ ಸಂಪನ್ಮೂಲವನ್ನು ಸಂಬAಧಿಸಿದ ಪೋಷಕರಿಂದ ವಂತಿಗೆ ಸಂಗ್ರಹಿಸುವ ಮೂಲ ಭರಿಸಲು ಪೋಷಕರ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಈ ಮಕ್ಕಳು ಮುಂದಿನ ತರಗತಿಗೆ ಹೋಗುವಾಗ ಏನು ಮಾಡುವುದು ಎನ್ನುವ ಪ್ರಶ್ನೆಗೆ ಎಸ್‌ಡಿಎಂಸಿ ಬಳಿ ಉತ್ತರ ಇಲ್ಲ. ಸರ್ಕಾರವೇ ಸೀಟುಗಳ ಮಿತಿ ಹೆಚ್ಚಿಸಬೇಕು ಎನ್ನುತ್ತಾರೆ ಪೋಷಕರು.
ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಆಂಗ್ಲ ಮಧ್ಯಮ ಶಾಲೆಯಲ್ಲಿ ಸರ್ಕಾರಿ ನಿಯಮಗಳ ಪ್ರಕಾರ 30 ಸೀಟ್‌ಗಳಿಗೆ ಅವಕಾಶ ಇದೆ. ಆದರೆ 80 ಅರ್ಜಿಗಳು ಬಂದಿದೆ. ಬೇಡಿಕೆ ಹೆಚ್ಚು ಇರುವುದರಿಂದ ಶಿಕ್ಷಣ ಇಲಾಖೆ ಒಪ್ಪಿಗೆ ಪಡೆದುಕೊಂಡು ಹೆಚ್ಚವರಿ 30 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಗೌರವ ಶಿಕ್ಷಕರ ಸಂಭಾವನೆ ಸೇರಿದÀಂತೆ ಅಗತ್ಯ ಖರ್ಚುಗಳನ್ನು ಪೋಷಕರ ವಂತಿಗೆ ಸಹಾಯದಿಂದ ಭರಿಸಲು ಪೋಷಕರ ಒಪ್ಪಿಗೆ ಪಡೆದುಕೊಳ್ಳಲಾಗಿದೆ.
ಚಂದನ್‌ಕುಮಾರ್, ಅಧ್ಯಕ್ಷ, ಎಸ್‌ಡಿಎಂಸಿ, ಪಿಎಂಶ್ರೀ ಶಾಲೆ, ಕುಶಾಲನಗರ
ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು. ನನ್ನ ಮಕ್ಕಳನ್ನೂ ಸರ್ಕಾರಿ ಶಾಲೆಯಲ್ಲಿ ಓದಿಸಬೇಕು ಎನ್ನುವುದು ನನ್ನ ಆಸೆ. ಆದರೆ ಕುಶಾಲನಗರ ಶಾಲೆಯಲ್ಲಿ 30 ಸೀಟುಗಳ ಮಿತಿ ಇರುವುದರಿಂದ ನಮ್ಮ ಮಗುವಿಗೆ ಅವಕಾಶ ಸಿಗುತ್ತಿಲ್ಲ. ಹೆಚ್ಚುವರಿ ಸೀಟುಗಳ ಮೂಲಕ ಪ್ರವೇಶ ಕೊಟ್ಟು ನಮ್ಮಿಂದಲೇ ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ. ಇದು ಈ ವರ್ಷಕ್ಕೆ ಪರಿಹಾರ ಆಗುತ್ತದೆ. ಆದರೆ ಮುಂದಿನ ತರಗತಿಗಳಿಗೆ ಏನು ಮಾಡುವುದು ? ಸರ್ಕಾರ ಇಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸಬೇಕು.
ಜಗದೀಶ್, ಪೋಷಕ, ಕುಶಾಲನಗರ