ಕನ್ನಡದ ಬೆಳವಣಿಗೆಗೆ ಇಂಗ್ಲಿಷ್ ವ್ಯಾಮೋಹ ಮಾರಕ

27 Jaggu 1
Published on

ಧಾರವಾಡ: ಸಮಕಾಲೀನ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ವಿದ್ಯಮಾನಗಳ ಕುರಿತು ಸ್ಪಷ್ಟವಾಗಿ, ನೇರವಾಗಿ ಮತ್ತು ವಾಸ್ತವಿಕವಾಗಿ ಬರೆಯುವುದು ಕಷ್ಟದ ಕೆಲಸ. ಇಂತಹ ಸಾಹಸಕ್ಕೆ ಲೇಖಕ ಮುಂದಾದಾಗ ಅನೇಕ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಸಂಸ್ಕೃತಿ ಚಿಂತಕ, ಲೇಖಕ ಡಾ. ಶಶಿಧರ ನರೇಂದ್ರ ಹೇಳಿದರು.

ಧಾರವಾಡದ ಬೇಂದ್ರೆ ಭವನದಲ್ಲಿ ತೇಜಸ್ ಇಂಡಿಯಾ, ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು ಹಾಗೂ ಧಾರವಾಡ ಕಟ್ಟೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರೊ.ಬಸವರಾಜ ಡೋಣೂರರ ‘ಅಸ್ಮಿತೆ’ ಮತ್ತು ‘ಪೂರ್ವ-ಪಶ್ಚಿಮ ಅನುಸಂಧಾನ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಸ್ವೀಕರಿಸಿದರೆ, ಕನ್ನಡ ಭಾಷೆಯ ಬೆಳವಣಿಗೆಗೆ ಯಾವ ತೊಂದರೆಯೂ ಇಲ್ಲ. ಇದರಿಂದ ಕನ್ನಡ ಭಾಷೆಗೆ ಅನುಕೂಲವಾಗುತ್ತದೆ. ಇಂಗ್ಲಿಷ್ ವ್ಯಾಮೋಹ ಕನ್ನಡದ ಸಹಜ ಬೆಳವಣಿಗೆಗೆ ಮಾರಕವಾಗಿದೆ ಎಂದರು.

ಕೃತಿಕಾರ ಪ್ರೊ. ಬಸವರಾಜ ಡೋಣೂರ ಮಾತನಾಡಿ, ದೇಶದ ಸುರಕ್ಷತೆ, ಬಲವರ್ಧನೆ ಒಗ್ಗಟ್ಟನ್ನು ಬಲಪಡಿಸುವ ಕೃತಿಗಳು ಬರಬೇಕಾಗಿದೆ. ರಾಷ್ಟ್ರೀಯತೆ ಒಂದು ಸೈದ್ಧಾಂತಿಕತೆಯಾಗಬೇಕು. ಆದರೆ, ಬುದ್ಧಿ ಜೀವಿಗಳಿಗೆ ಸಮಾಜದ, ದೇಶದ ಒಗ್ಗಟ್ಟಿನಲ್ಲಿ ಆಸಕ್ತಿಯಿಲ್ಲ ಎನಿಸುತ್ತದೆ. ಅಂಬೇಡ್ಕರ್ ಮತ್ತು ಸಾವರ್ಕರ್ ಅವರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಬೇಕಿದೆ. ಭಗವದ್ಗೀತೆ ಮತ್ತು ಭಾರತೀಯ ಸಂವಿಧಾನ ಅಕ್ಕ ಪಕ್ಕದಲ್ಲಿಟ್ಟು ಅಧ್ಯಯನ ಮಾಡಬೇಕಿದೆ ಎಂದು ಅಭಿಪ್ರಾಯಿಸಿದರು.

ಮಾತೃ ಭಾಷೆಯ ಜತೆ ಹಿಂದಿ ಕಡ್ಡಾಯವಾಗಿ ಕಲಿಯಬೇಕಿದೆ. 3ನೇ ಭಾಷೆಯಾಗಿ ಇಂಗ್ಲಿಷ್‌ನ್ನು ಕಲಿಸಬೇಕಿದೆ. ಹಿಂದಿಯನ್ನು ಬಿಟ್ಟುಕೊಟ್ಟು ದ್ವಿಭಾಷಾ ನೀತಿ ಅನುಸರಿದರೆ ಮಕ್ಕಳು ಅಂತಿಮವಾಗಿ ಒಂದೇ ಭಾಷೆ ಇಂಗ್ಲಿಷ್‌ನ್ನು ಕಲಿಯುತ್ತಾರೆ. ಆಗ ಕನ್ನಡ ಸತ್ತು ಹೋಗುತ್ತದೆ. ಭಾಷಾ ರಾಜಕಾರಣ ಮಾಡದೆ ತ್ರಿಭಾಷಾ ನೀತಿ ಭಾರತೀಯರು ಸ್ವೀಕರಿಸಬೇಕು ಎಂದು ಪ್ರತಿಪಾದಿಸಿದರು.

ಡೋಣೂರರ ‘ಅಸ್ಮಿತೆ’ ಕೃತಿಯ ಕುರಿತು ಮಹಾಂತಪ್ಪ ನಂದೂರ ಮಾತನಾಡಿದರು. ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರಶಾಂತ ಮಾಂಡ್ರೆ ನಿರೂಪಿಸಿದರು, ಡಾ.ಪ್ರಕಾಶ ಬಾಳಿಕಾಯಿ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣ ತೊರ್ಲಹಳ್ಳಿ ಸ್ವಾಗತಿಸಿದರು.

ಡಾ.ಕೃಷ್ಣ ಕಟ್ಟಿ, ಅರವಿಂದ ಕುಲಕರ್ಣಿ, ಜಯತೀರ್ಥ ಜಹಗೀರದಾರ, ಡಾ.ಪಿ.ಎ. ಪೋಲಿಸ್ ಪಾಟೀಲ, ಡಾ.ಶರಭೇಂದ್ರಸ್ವಾಮಿ ಬಿ.ಎಂ, ಡಾ.ಆರ್.ಎ್.ಇಂಚಲ್, ಡಾ.ಶ್ಯಾಮಲಾ ರತ್ನಾಕರ, ಡಾ.ಮುಕುಂದ ಲಮಾಣಿ, ಪ್ರೊ.ಎನ್.ಎಚ್.ಕಲ್ಲೂರ, ಪ್ರೊ.ದೀಕ್ಷಿತ ಡಾ.ಮೃತ್ಯುಂಜಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net