ಕಾರ್ಗಲ್: ಚಿತ್ರದುರ್ಗದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರ ಜೀವನಾಧಾರಿತ ಸಾಹಸಮಯ ‘ಇನ್ಕ್ರೆಡಿಬಲ್ ಮಂಕೀ ಮ್ಯಾನ್’ ಇಂಗ್ಲಿಷ್ ಹಾಗೂ ಕನ್ನಡ ಸಿನಿಮಾಕ್ಕೆ 960 ಅಡಿ ಆಳದ ಜೋಗ ಜಲಪಾತವನ್ನು ಇಳಿದು-ಹತ್ತುವ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.
ಜೋಗ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ವಾರದ ಚಿತ್ರೀಕರಣಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಪ್ರತಿ ಬಾರಿ ಸುರಕ್ಷತಾ ಕ್ರಮಗಳಿಲ್ಲದೆ ನೈಜವಾಗಿ ಇಳಿಯುತ್ತಿದ್ದರು. ಆದರೆ ಈಗ ಜ್ಯೋತಿರಾಜ್ ಚಿತ್ರೀಕರಣದ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರು. ಹಗ್ಗದ ಸಹಾಯದಿಂದ ರಾಕೆಟ್ ಜಲಪಾತದಿಂದ ಕೆಳಗಿಳಿದು ಮೇಲಕ್ಕೆ ಹತ್ತಿದರು.
ಮೂಲತಃ ಭಾರತೀಯರಾಗಿರುವ ಆಸ್ಟ್ರೇಲಿಯಾ ಪ್ರಜೆ ಸ್ಟಾ ್ಯ್ಲೀ ಅವರು ಈ ಚಿತ್ರವನ್ನು ನಿರ್ದೇಶಿಸಿ ನಿರ್ವಿುಸುತ್ತಿದ್ದಾರೆ. ಈಗಾಗಲೇ ಶೇ.70ರಷ್ಟು ಚಿತ್ರೀಕರಣ ಮುಗಿದಿದ್ದು ಉಳಿದ ಭಾಗದ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜ್ಯೋತಿರಾಜ್ ಮಾತನಾಡಿ, ಕಣಿವೆ ಆಳಕ್ಕೆ ಈಗಾಗಲೇ 13 ಬಾರಿ ಇಳಿದು ಹತ್ತಿದ್ದೇನೆ. ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದ ಹಾಗೂ ಆತ್ಮಹತ್ಯೆ ಮಾಡಿಕೊಂಡ 8 ಮೃತದೇಹಗಳನ್ನು ಮೇಲಕ್ಕೆತ್ತಿರುವೆ. ತುರ್ತು ಸಂದರ್ಭಗಳಲ್ಲಿ ಅಪಾಯ ಎದುರಿಸಿ ಮಾಡಿದ ಈ ಎಲ್ಲ ಸನ್ನಿವೇಶಗಳನ್ನು ಸಿನಿಮಾದಲ್ಲಿ ಡ್ಯೂಪ್ ಆಗಿ ಮತ್ತೊಮ್ಮೆ ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
----ಕೋಟ್--
ಪ್ರತಿ ಬಾರಿ ಜೋಗ ಜಲಪಾತ ಇಳಿದು-ಹತ್ತುವಾಗ ಸುರಕ್ಷತಾ ಕ್ರಮ ಅನುಸರಿಸುತ್ತಿರಲಿಲ್ಲ. ಚಿತ್ರೀಕರಣಕ್ಕಾಗಿ ಹಗ್ಗವನ್ನು ಉಪಯೋಗಿಸಲಾಗಿದೆ. ಇದೊಂದು ವಿಶೇಷ ಅನುಭವ ನೀಡಿದೆ. ಜೋಗ ಜಲಪಾತ ಸುಂದರ ಪ್ರಕೃತಿ ತಾಣವಾಗಿದ್ದು ಇಲ್ಲಿನ ಸೌಂದರ್ಯವನ್ನು ಸವಿಯಬೇಕೇ ವಿನಃ ಆತ್ಮಹತ್ಯೆ ಮಾಡಿಕೊಳ್ಳುವಂಥ ತಪ್ಪು ನಿರ್ಧಾರ ಮಾಡಬಾರದೆಂಬ ಸಂದೇಶ ಚಿತ್ರದಲ್ಲಿದೆ.