ಇಂಗ್ಲಿಷ್ ಶಿಕ್ಷಣ ಅತ್ಯಗತ್ಯ

FEBRA., 28, HNP., Ph.1.
Published on

ಹೊಳೆನರಸೀಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಿಕ್ಷಣ ಅತ್ಯಗತ್ಯ. ಆದರೆ ಕೆಲ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ತರಗತಿ ಪ್ರಾರಂಭಿಸದಂತೆ ತೊಂದರೆ ನೀಡುತ್ತಿದ್ದಾರೆ. ಹಳ್ಳಿ ಜನರ ಶಾಪ ಅವರಿಗೆ ತಟ್ಟದೇ ಇರದು ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಾರದಾ ಪೂಜಾ ಮಹೋತ್ಸವದಲ್ಲಿ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಹಣವಂತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಉನ್ನತ ವ್ಯಾಸಂಗಕ್ಕೆ ಕಳಿಸುತ್ತಾರೆ. ಉನ್ನತ್ತ ಶಿಕ್ಷಣಕ್ಕೆ ಇಂಗ್ಲಿಷ್ ಜ್ಞಾನ ಬೇಕು, ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಕಲಿಸದೇ ಇದ್ದರೆ ಅವರ ಉನ್ನತಿ ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

1983 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಾಲೂಕಿನ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಮುಂಜೂರಾತಿ ಪಡೆದು, ದಾನಿಗಳ ಸಹಾಯದಿಂದ ಪಟ್ಟಣದ ಮುಖ್ಯ ಭಾಗದಲ್ಲಿ ಪ್ರಾರಂಭಿಸಿದ್ದರು. ವಿದ್ಯಾರ್ಥಿನಿಯರ ಸ್ವಾಭಿಮಾನದ ಬದುಕಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಉತ್ತಮ ಶಿಕ್ಷಣಕ್ಕೆ ಕೈಗೊಂಡ ಕಾರ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಮುಂದೆ ಸಾಗಿದಾಗ, ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಮಾತನಾಡಿ, ಜೀವನಕ್ಕೆ ಸಾಮಾನ್ಯ ಜ್ಞಾನ ಅತ್ಯವಶ್ಯ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶಿಕ್ಷಣದ ಸಂದರ್ಭದಲ್ಲಿ ಜೀವನ ರೂಪಿಸಿಕೊಳ್ಳಲು ಅಗತ್ಯ ಚಿಂತನೆಗಳನ್ನು ಮಾಡಿದಾಗ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತದೆ. ಆದ್ದರಿಂದ ಶಿಕ್ಷಕರ ಬೋಧನೆ, ಸಲಹೆ ಹಾಗೂ ಸೂಚನೆಗಳನ್ನು ಗೌರವಿಸಿ, ಕಲಿಕೆಯಲ್ಲಿ ಹೆಚ್ಚಿನ ಕಾಳಜಿ ತೋರುತ್ತಾ, ಪರೀಕ್ಷೆಯ ಭಯವನ್ನು ಬಿಟ್ಟು, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಜೀವನಕ್ಕೆ ಭವ್ಯ ಬುನಾದಿ ಹಾಕುವಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ಪೂರ್ವ ಶಿಕ್ಷಣವು ಮಹತ್ವದ ಘಟ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರು ಜವಾಬ್ದಾರಿ ಅರಿತು, ಮೊಬೈಲ್ ವ್ಯಾಮೋಹವನ್ನು ಸಂಪೂರ್ಣ ಬಿಟ್ಟು, ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಸಿಕೊಂಡು ತಂದೆ, ತಾಯಿ, ಕಲಿತ ಶಾಲೆ ಹಾಗೂ ಶಿಕ್ಷಕರು ಹೆಮ್ಮೆ ಪಡುವಂತೆ ಅಂಕ ಗಳಿಸಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ತಾಪಂ ಅಧ್ಯಕ್ಷೆ ಜಯಲಕ್ಷ್ಮೀ ಮಂಜುನಾಥ್, ಪ್ರಾಂಶುಪಾಲ ದೇವರಾಜ್, ಹೊಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯೋಗಾನರಸಿಂಹ, ಹಾಸನ ಎಂಸಿಇ ಕಾಲೇಜಿನ ಉಪನ್ಯಾಸಕ ರಾಮಕೃಷ್ಣ, ಪಡುವಲಹಿಪ್ಪೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣ್, ತಾ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸಿಡಿಸಿ ಕಾರ್ಯಧ್ಯಕ್ಷ ಕೆ.ಶ್ರೀನಿವಾಸ, ಪುರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್.ಸುದರ್ಶನ್ ಹಾಗೂ ಜಯಣ್ಣ, ಗಿರೀಶ್, ಕುಮಾರಸ್ವಾಮಿ, ಮಂಜುನಾಥ್, ಜಯಪ್ರಕಾಶ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net