ಶಿಕ್ಷಕರಿಲ್ಲದೆ ಆಂಗ್ಲ ವಿಭಾಗ ಆರಂಭ

English department starts without teachers
Published on

ಹಾನಗಲ್ಲ: ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ತಾಲೂಕಿನ 15 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಶಿಕ್ಷಣ ಇಲಾಖೆ ಮಂಜೂರಾತಿ ನೀಡಿದೆ. ಆದರೆ, ಪಾಠ ಮಾಡಲು ಶಿಕ್ಷಕರ ಸೌಲಭ್ಯ ಇಲ್ಲದಾಗಿದೆ.

ತಾಲೂಕಿನಲ್ಲಿ 7 ವರ್ಷದ ಹಿಂದೆಯೇ ಆಡೂರು, ಹಾನಗಲ್ಲ, ವರ್ದಿಯ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿದೆ. ಇವುಗಳಲ್ಲಿ 7ನೇ ತರಗತಿವರೆಗೆ ಮಕ್ಕಳು ಅಭ್ಯಸಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬೊಮ್ಮನಹಳ್ಳಿ, ಹೋತನಹಳ್ಳಿ, ತಿಳವಳ್ಳಿ, ನರೇಗಲ್ಲ, ನರೇಗಲ್ಲ ಎಚ್​ಪಿಎಸ್, ಮಾರನಬೀಡ, ಯಳವಟ್ಟಿ, ಆಲದಕಟ್ಟಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಈ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರನ್ನು ಒದಗಿಸಿರಲಿಲ್ಲ.

15 ಆಂಗ್ಲ ಮಾಧ್ಯಮ ಶಾಲೆಗಳು ಮಂಜೂರು: ಈಗ ಮತ್ತೆ ಮಾಸನಕಟ್ಟಿ, ಅರಳೇಶ್ವರ, ಉಪ್ಪುಣಸಿ, ಕೊಪ್ಪರಸಿಕೊಪ್ಪ, ಕೆಲವರಕೊಪ್ಪ, ಬೈಲವಾಳ ಆರೆಗೊಪ್ಪ, ಬಮ್ಮನಹಳ್ಳಿ, ಬಾಳಂಬೀಡ, ಹಿರೇಹುಲ್ಲಾಳ, ಬೈಚವಳ್ಳಿ, ಶ್ಯಾಡಗುಪ್ಪಿ, ಬ್ಯಾತನಾಳ, ಅಕ್ಕಿಆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಾನಗಲ್ಲ, ಕಂಚಿನೆಗಳೂರಿನ ಸರ್ಕಾರಿ ಉರ್ದು ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಆಂಗ್ಲ ಮಾಧ್ಯಮ ಆರಂಭಿಸಲು ಆದೇಶ ಮಾಡಲಾಗಿದೆ.

ತಾಲೂಕಿನ 30 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶುರುವಾದಂತಾಗಿದೆ. ಆದರೆ, ಈ ಯಾವ ಶಾಲೆಗಳಿಗೆ ಈಗಲೂ ಅದಕ್ಕೆ ಅಗತ್ಯವಿರುವ ಕೊಠಡಿ, ಆಂಗ್ಲ ಮಾಧ್ಯಮ ಶಿಕ್ಷಕರನ್ನು ಒದಗಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಕನ್ನಡ ಮಾಧ್ಯಮದ ಶಿಕ್ಷಕರ ನಿಯೋಜನೆ: ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರನ್ನೇ ಆಂಗ್ಲ ಮಾಧ್ಯಮಕ್ಕೆ ನಿಯೋಜನೆ ಮಾಡುವುದರಿಂದ ಕನ್ನಡ ಮಾಧ್ಯಮದ ಮಕ್ಕಳಿಗೆ ಶೈಕ್ಷಣಿಕ ಹಿನ್ನಡೆಯಾಗುವುದು ಖಚಿತ. ಕನ್ನಡ ಮಾಧ್ಯಮದ ಶಿಕ್ಷಕರಿಗೆ ನೀಡಿರುವ ಆಂಗ್ಲ ಮಾಧ್ಯಮದ ತಾತ್ಕಾಲಿಕ ತರಬೇತಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು ಎಂಬ ಪ್ರಶ್ನೆಯೂ ಪಾಲಕರಲ್ಲಿದೆ.

ಆಂಗ್ಲ ಮಾಧ್ಯಮಕ್ಕೆ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಎಂಬ ನಿಯಮ ಬದಲಿಸಿ ಈಗ 50 ಮಕ್ಕಳಿಗೆ ಒಬ್ಬ ಶಿಕ್ಷಕರು ಎಂಬ ಆದೇಶವಾಗಿರುವ ಮಾಹಿತಿಯಿದೆ. ಇದರಿಂದ ಮಕ್ಕಳು ಕಡಿಮೆ ಇರುವಲ್ಲಿ ಒಬ್ಬರೇ ಎರಡು ವರ್ಗ ನಿಭಾಯಿಸುವುದು ಕಠಿಣದ ಕೆಲಸ. ತಾಲೂಕಿನಲ್ಲಿ ಆಂಗ್ಲ ಮಾಧ್ಯಮಕ್ಕೆ ಬೇಡಿಕೆಯಿದೆ. ಆದರೆ, ಅದಕ್ಕೆ ಅಗತ್ಯ ಸೌಲಭ್ಯ ನೀಡುವುದು ಅಷ್ಟೇ ಅವಶ್ಯವಾಗಿದೆ.

ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ: ಸರ್ಕಾರಿ ಶಾಲೆಗಳಿಗೆ ಜೂನ್ ಹೊತ್ತಿಗೆ ಖಾಲಿ ಇರುವ ಹುದ್ದೆಗೆ ಅತಿಥಿ ಶಿಕ್ಷಕರು ಅಥವಾ ಕಾಯಂ ಶಿಕ್ಷಕರನ್ನು ಒದಗಿಸದೆ ಇರುವುದರಿಂದ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳು ಖಾಸಗಿ ಶಾಲೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಶಾಲೆ ಆರಂಭಿಸುವ ಮೊದಲೇ ಶಿಕ್ಷಕರು, ಮೂಲಸೌಲಭ್ಯ ಒದಗಿಸಲು ಸರ್ಕಾರ, ಇಲಾಖೆ ಕಾಳಜಿ ವಹಿಸದಿದ್ದರೆ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ. ಇದು ಮಕ್ಕಳನ್ನು ಖಾಸಗಿ ಶಾಲೆಗಳತ್ತ ಸೆಳೆಯುವಲ್ಲಿ ಸುಲಭ ಮಾರ್ಗವಾಗುತ್ತದೆ ಎಂಬ ಸತ್ಯ ಇಲಾಖೆ ಅರಿವಿಗೆ ಬರಬೇಕು. ಆಂಗ್ಲ ಮಾಧ್ಯಮದಲ್ಲಿಯೇ ಡಿ.ಇಡಿ, ಬಿ.ಇಡಿ ಶಿಕ್ಷಣ ಪಡೆದವರನ್ನೇ ಪಾಠ ಮಾಡಲು ನೇಮಕ ಮಾಡಿಕೊಳ್ಳಬೇಕು ಎಂಬುದು ಪಾಲಕರ ಆಗ್ರಹವಾಗಿದೆ.

ತಾಲೂಕಿನಲ್ಲಿ ಹೊಸ 15 ಸೇರಿ ಒಟ್ಟು 30 ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಾದಂತಾಗಿದೆ. ತಾತ್ಕಾಲಿಕವಾಗಿ ಕನ್ನಡ ಮಾಧ್ಯಮದ ಶಿಕ್ಷಕರಿಗೇ ತರಬೇತಿ ನೀಡಿ ಆಂಗ್ಲ ಮಾಧ್ಯಮ ನಡೆಸಲಾಗುತ್ತಿದೆ. ಕನ್ನಡ ಮಾಧ್ಯಮಕ್ಕೆ ಆಗುವ ಶಿಕ್ಷಕರ ಕೊರತೆ ತಪ್ಪಿಸಲು ಸರ್ಕಾರ ಒಂದಷ್ಟು ಅತಿಥಿ ಶಿಕ್ಷಕರನ್ನು ಒದಗಿಸಿದೆ. ಇಷ್ಟಾಗಿಯೂ ತಾಲೂಕಿನಲ್ಲಿ ಆಂಗ್ಲ ಮಾಧ್ಯಮಕ್ಕೆ ಬಹಳಷ್ಟು ಬೇಡಿಕೆಯಿದೆ. | ವಿ.ವಿ. ಸಾಲಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ, ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net