ಹೊಸ ಸವಾಲು ಇಂಜಿನಿಯರ್‌ಗಳು ಸನ್ನದ್ಧರಾಗಲಿ: ಎಐಸಿಟಿಐ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್

mysore
Published on

ಮೈಸೂರು: ಎಲ್ಲ ಕ್ಷೇತ್ರಗಳಲ್ಲೂ ಪರಿಣಾಮ ಬೀರುತ್ತಿರುವ ಆಧುನಿಕ ತಂತ್ರಜ್ಞಾನವಾಗಿರುವ ಕೃತಕ ಬುದ್ಧಿಮತ್ತೆ(ಎಐ), ಚಾರ್ಟ್ ಜಿಪಿಟಿ ಎದುರಿಸಲು ಇಂಜಿನಿಯರ್‌ಗಳು ಸನ್ನದ್ಧರಾಗಬೇಕಿದೆ ಎಂದು ದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಐ) ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಹೇಳಿದರು.


ಎನ್‌ಐಇ ಕಾಲೇಜಿನಲ್ಲಿ ಆಯೋಜಿಸಿದ್ದ 14ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಎಐ, ಚಾರ್ಟ್‌ಜಿಪಿಟಿ ತಂತ್ರಜ್ಞಾನವು ಹೊಸ ಸವಾಲು ಸೃಷ್ಟಿಸಿದೆ. ಉದ್ಯೋಗಾವಕಾಶಗಳ ಮೇಲೆ ಅನಿಶ್ಚಿತ ತಲೆದೋರಿದೆ. ಆದ್ದರಿಂದ ಸುಸ್ಥಿರ ಪ್ರಗತಿಗಾಗಿ ಹೊಸ ಆಲೋಚನೆ, ಉಪಕ್ರಮ ಮತ್ತು ಕೌಶಲ ವೃದ್ಧಿಯೊಂದಿಗೆ ಇಂಜಿನಿಯರ್‌ಗಳು ಸವಾಲುಗಳನ್ನು ಎದುರಿಸಬೇಕು ಎಂದರು.


ತ್ವರಿತಗತಿಯಲ್ಲಿ ಬದಲಾವಣೆಗೆ ಕಾರಣವಾಗಿರುವ ಈ ನವತಂತ್ರಜ್ಞಾನವು ಎಲ್ಲ ಕ್ಷೇತ್ರಗಳ ಮೇಲೆ ಸಕಾರಾತ್ಮಕ, ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದ್ದು, ವೃತ್ತಿಜೀವನ ಇನ್ನಷ್ಟು ಕ್ಲಿಷ್ಟಕರವಾಗಿಸುತ್ತಿದೆ. ಇನ್ನು ಮುಂದೆ ಸೋಬರಿಗಳಾದರೆ ನಮ್ಮೆಲ್ಲರ ಭವಿಷ್ಯ ಕರಾಳವಾಗಲಿದೆ. ಆದ್ದರಿಂದ ನಿರಂತರ ಕಲಿಕೆ, ಹೊಸ ಯೋಚನೆ, ಅನ್ವೇಷಣೆ, ಕಠಿಣ ಪರಿಶ್ರಮ, ಕೌಶಲ ವೃದ್ಧಿಸಿಕೊಂಡು ವೃತ್ತಿಯ ಕಡೆಗೆ ತೆರೆದುಕೊಳ್ಳಬೇಕಿದೆ ಎಂದರು.


25 ವರ್ಷ ಹಿಂದಿನ ಇಂಜಿನಿಯರಿಂಗ್ ಬೋಧನಾ ಕ್ರಮ, ಕಲಿಕಾ ಕ್ರಮ ಇದೀಗ ಅಪ್ರಸ್ತುತ. ತಂತ್ರಜ್ಞಾನ ಅಂಗೈಯಲ್ಲೇ ಎಲ್ಲ ಮಾಹಿತಿಯನ್ನು ಉಣಬಡಿಸುತ್ತದೆ. ಆದ್ದರಿಂದ ಶಿಕ್ಷಕರ ಪಾತ್ರ ಬದಲಾಗಿದೆ. ಆದ್ದರಿಂದ ಹಳೇ ಬೋಧನಾ ಶೈಲಿ ಈಗ ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಹೊಸತನದೊಂದಿಗೆ ತಂತ್ರಜ್ಞಾನವನ್ನೂ ಮೈಗೂಡಿಸಿಕೊಳ್ಳಬೇಕು ಎಂದರು.


ಮುಂದುವರಿದ ದೇಶದ ಉನ್ನತ ಶಿಕ್ಷಣ ಪ್ರವೇಶಾತಿ ಪ್ರಮಾಣ ಶೇ.80ರಿಂದ 90ರಷ್ಟಿದೆ. ಭಾರತ ಸಹ ಈ ಗುರಿಯನ್ನು ತಲುಪಬೇಕು. ಇಲ್ಲವಾದರೆ ಭವಿಷ್ಯ ಕಷ್ಟಕರವಾಗಲಿದೆ. ದೇಶದಲ್ಲಿ 11 ಸಾವಿರ ವಿಶ್ವವಿದ್ಯಾಲಯಗಳು, 40 ಸಾವಿರ ಕಾಲೇಜುಗಳಿವೆ. 26 ಸಾವಿರ ಕೋಟಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಶಿಕ್ಷಣದ ಮೂಲಕ ತಂತ್ರಜ್ಞಾನ ವರ್ಗಾವಣೆ ಸಾಧ್ಯ ಎಂದರು.


ದೇಶದಲ್ಲಿ ವರ್ಷಕ್ಕೆ 36 ಸಾವಿರ ಇಂಜಿನಿಯರ್‌ಗಳು ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಅಂದಾಜು 3.5 ಕೋಟಿ ದೇಶದ ಇಂಜಿನಿಯರ್‌ಗಳು ಜಗತ್ತಿನ ವಿವಿಧ ದೇಶಗಳಲ್ಲಿ ಕಾರ್ಯನಿರತರಾಗಿದ್ದಾರೆ. ಹೀಗಾಗಿ, ಭಾರತ ಇಂಜಿನಿಯರ್‌ಗಳ ಉತ್ಪಾದನಾ ರಾಷ್ಟ್ರ. ಜಾಗತಿಕ ಮಟ್ಟದ ಬಹುರಾಷ್ಟ್ರೀಯ ಕಂಪನಿಗಳ ಆಯಕಟ್ಟಿನ ಜಾಗದಲ್ಲೇ ನಮ್ಮ ದೇಶದ ವಿದ್ಯಾರ್ಥಿಗಳು ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸ್ವದೇಶದ ತಾಂತ್ರಿಕ ಶಿಕ್ಷಣ ವ್ಯವಸ್ಥೆ, ಇಂಜಿನಿಯರ್‌ಗಳ ಕೌಶಲ, ಶ್ರದ್ಧೆ, ಕಠಿಣ ಪರಿಶ್ರಮ ಕಾರಣ ಎಂದರು.


ಇತ್ತೀಚಿನ ವರ್ಷಗಳಲ್ಲಿ ಮುಂದುವರಿದ ದೇಶಗಳಿಗೆ ಇಂಜಿನಿಯರ್‌ಗಳ ವಲಸೆ ಹೆಚ್ಚುತ್ತಿದೆ. ಶೇ.22ರಷ್ಟು ಬಿಇ ವಿದ್ಯಾರ್ಥಿಗಳು ಪಲಾಯನ ಮಾಡಿ ವಿದೇಶಗಳಲ್ಲಿ ಹೊಸ ಭವಿಷ್ಯ ಕಟ್ಟಿಕೊಂಡು ಆಯಾ ದೇಶಗಳನ್ನು ಉದ್ಧಾರ ಮಾಡುತ್ತಿದ್ದಾರೆ. ಶೇ.4ರಷ್ಟು ವಿದ್ಯಾರ್ಥಿಗಳು ಯುಪಿಎಸ್‌ಸಿ ಇನ್ನಿತರ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ. ಆದರೆ 2, 3ನೇ ಹಂತ ಇಂಜಿನಿಯರ್ ವಿದ್ಯಾರ್ಥಿಗಳೇ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಟ್ಟಿದ್ದಾರೆ ಎಂದರು.


717 ಯುಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರವನ್ನು ಪ್ರದಾನ ಮಾಡಲಾಯಿತು. 9 ವಿದ್ಯಾರ್ಥಿಗಳಿಗೆ ಪಿಎಚ್.ಡಿ, 42 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.


ಕಾಲೇಜಿನ ಅಧ್ಯಕ್ಷ ಡಾ.ಎಂ.ಎಸ್.ರಂಗನಾಥ್, ಪ್ರಾಂಶುಪಾಲ ಡಾ.ರೋಹಿಣಿ ನಾಗಪದ್ಮ, ಉಪ ಪ್ರಾಂಶುಪಾಲ ಡಾ.ಎಂ.ಎಸ್. ಗಣೇಶ್‌ಪ್ರಸಾದ್, ಡೀನ್(ಶೈಕ್ಷಣಿಕ) ಡಾ.ಸಿ.ವಿದ್ಯಾರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net