

ಬೆಂಗಳೂರು: ಮಹಾನಗರದಲ್ಲಿ ಜಾತಿ ಸಮೀಕ್ಷೆಗೆ ಪಾಲಿಕೆಯ ಇಂಜಿನಿಯರ್‌ಗಳನ್ನು ಬಳಸಿಕೊಳ್ಳುತ್ತಿರುವುದರಿಂದ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಮತ್ತೆ ಅಡ್ಡಿ ಎದುರಾಗಿದೆ.
ಕಳೆದ ವಾರ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ಗುಂಡಿಗಳನ್ನು ಮುಚ್ಚಿದ ಪರಿಣಾಮ ಹಲವು ರಸ್ತೆಗಳು ಗುಂಡಿಮುಕ್ತಗೊಂಡಿದ್ದವು. ಇನ್ನೂ ಕೆಲ ರಸ್ತೆಗಳಲ್ಲಿ ಅರ್ಧದಷ್ಟು ಕಾಮಗಾರಿ ಕೈಗೊಂಡಿದ್ದು, ಇನ್ನುಳಿದ ಕಾರ್ಯವನ್ನು ದಸರಾ ಹಬ್ಬದ ಬಳಿಕ ಕೈಗೆತ್ತಿಕೊಳ್ಳಲು ವೇಳಾಪಟ್ಟಿ ಹಾಕಿಕೊಳ್ಳಲಾಗಿತ್ತು. ಆದರೆ, ಜಾತಿ ಸಮೀಕ್ಷೆಗೆ ಶಿಕ್ಷಕರ ಜತೆಗೆ ಇಂಜಿನಿಯರ್ ಹಾಗೂ ಇತರ ಅಧಿಕಾರಿಗಳನ್ನು ನಿಯೋಜಿಸಿರುವುದರಿಂದ ಗುಂಡಿ ಮುಚ್ಚುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ದಸರಾ ಹಬ್ಬಕ್ಕೂ ಮುನ್ನ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳಿಗೆ ಎರಡು ದಿನ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈಗ ಸಮೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಗುಂಡಿ ಮುಚ್ಚಲು ಮೇಲ್ಚಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಮಳೆಯಿಂದ ಗುಂಡಿ ಮುಚ್ಚಲು ಸಮಯ ಸಿಕ್ಕಿಲ್ಲ. ಈ ವಾರವಿಡೀ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಪಾಟ್‌ಹೋಲ್ ದುರಸ್ತಿ ಹಿನ್ನಡೆ ಕಂಡಿದೆ. ಹಬ್ಬಕ್ಕೆ ತೆರಳಿದ್ದ ಕಾರ್ಮಿಕರು ಸೋಮವಾರ ವಾಪಸ್ಸಾಗಿದ್ದರೂ, ಕೆಲಸ ಇಲ್ಲದಂತಾಗಿದೆ.
2,500 ಗುಂಡಿ ಬಾಕಿ:
ಎಲ್ಲ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಈಗಾಗಲೇ 5 ಸಾವಿರಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಇದರ ಹೊರತಾಗಿಯೂ ಇನ್ನೂ 2,500ಕ್ಕೂ ಹೆಚ್ಚು ಗುಂಡಿಗಳು ಬಾಕಿ ಇವೆ. ಇವುಗಳನ್ನು ಮುಚ್ಚುವಂತೆ ಆಯಾ ಪಾಲಿಕೆಗಳ ಆಯುಕ್ತರಿಗೆ ಸೂಚಿಸಲಾಗಿದೆ. ನಿಧಾನವಾದರೂ ತ್ವರಿತವಾಗಿ ಗುಂಡಿಮುಕ್ತ ನಗರವಾಗಿಸುವತ್ತ ದೃಷ್ಟಿಹರಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಮುಖ್ಯ ಆಯುಕ್ತರ ಹೇಳಿಕೆಯ ಹೊರತಾಗಿಯೂ ನಗರದ ಮುಖ್ಯರಸ್ತೆಗಳಲ್ಲಿ ಇನ್ನೂ 5 ಸಾವಿರಕ್ಕೂ ಹೆಚ್ಚು ಪಾಟ್‌ಹೋಲ್‌ಗಳಿವೆ ಎಂದು ಅಂದಾಜಿಸಲಾಗಿದೆ. ಇದರ ಜತೆಗೆ ವಾರ್ಡ್ ಮಟ್ಟದಲ್ಲಿಯೂ ಇಷ್ಟೇ ಸಂಖ್ಯೆಯ ಗುಂಡಿಗಳಿದ್ದು ಅವುಗಳನ್ನು ಮುಚ್ಚಲು ಇನ್ನಷ್ಟೇ ಕೆಲಸ ಆರಂಭಿಸಬೇಕಿದೆ. ಹಾಗಾಗಿ ಸಮೀಕ್ಷೆ ಪೂರ್ಣವಾಗುವವರೆಗೂ ನಗರ ಗುಂಡಿಮುಕ್ತ ಆಗಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಬವಣೆಗೆ ಒಳಾಗಿದ್ದಾರೆ.