

ಮಂಡ್ಯ: ಮಹನೀಯರ ಬದುಕು ಆರಂಭದಲ್ಲಿ ಸಾಮಾನ್ಯ ಮನುಷ್ಯರಂತೆ ಕಂಡರೂ ಅವರ ಸರಳ ಜೀವನ ಹಾಗೂ ವ್ಯಕ್ತಿತ್ವದಿಂದ ಮುಂದೆ ದೇವರಾಗಿ ಕಾಣುತ್ತಾರೆ ಎಂದು ಬೆಂಗಳೂರು ಪ್ರಕಾಶಕ ವೀರಕಪುತ್ರ ಶ್ರೀನಿವಾಸ್ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್, ಟಿ.ತಿಮ್ಮೇಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಇಂಜಿನಿಯರ್ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಎಚ್.ಆರ್.ಕನ್ನಿಕಾ ಅವರ ‘ಮುಂಜಾನೆ ಮೇಲೆದ್ದು ನೆನೆಯುವೆವು ಮುದದಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪಾಲಕರಿಗೆ ಮಕ್ಕಳು ಪುಸ್ತಕಗಳನ್ನು ತರುವ ನಿರೀಕ್ಷೆಗೆ ಒಳಪಡಬೇಕು. ಕೃತಿಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿ ದಿಸೆಯಿಂದಲೇ ರೂಢಿಸಿಕೊಳ್ಳಬೇಕು. ರಾಮಕೃಷ್ಣ ಪರಮಹಂಸರು ದೇವರಲ್ಲ, ಏಕೆಂದರೆ ಅವರು ಸಾಮಾನ್ಯರಂತೆ ಕಾಣುತ್ತಾರೆ. ಆದರೆ ಅವರ ಜೀವನದಲ್ಲಿ ನಡೆದ ಘಟನೆಯಿಂದ ಬೆಳಕಿಗೆ ಬರುವ ಮೂಲಕ ಜತೆಗೆ ಅವರ ನೀತಿಗಳಿಂದ ಹೆಸರುವಾಸಿಯಾಗಿ ದೇವರಾಗಿ ಕಾಣುತ್ತಾರೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಡೆ ಆಸಕ್ತಿ ಮೂಡಿಸುವುದು ಮುಖ್ಯವಾಗಬೇಕು. ಮಿಲಿಟರಿ ಸೇವೆಯಲ್ಲಿ ನಿರತರಾಗುವಂತೆ ವಿದ್ಯಾರ್ಥಿಗಳಿಗೆ ಹಲವು ಕೋರ್ಸ್‌ಗಳ ಬಗ್ಗೆ ಹಾಗೂ ಪರೀಕ್ಷೆಗಳ ತರಬೇತಿ ನೀಡುವುದನ್ನು ಈ ಟ್ರಸ್ಟ್ ಮತ್ತು ಪ್ರತಿಷ್ಠಾನಗಳು ಮನಸು ಮಾಡಬೇಕು. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಬಂದವರಿಗೆ ಉದ್ಯೋಗಾವಕಾಶಗಳು ಹೆಚ್ಚು ಸಿಗುತ್ತವೆ ಎಂದು ತಿಳಿಸಿದರು.
ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಟಿ.ತಿಮ್ಮೇಗೌಡ, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ, ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್, ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕಿ ಎಚ್.ಆರ್.ಕನ್ನಿಕಾ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ನಿವೃತ್ತ ಶಿಕ್ಷಕ ಸಿ.ಜಿ.ಮಂಚಯ್ಯ, ಕಾರ್ಯಪಾಲಕ ಇಂಜಿನಿಯರ್ ವಿ.ಜಯಂತ್, ಕರ್ನಾಟಕ ಇಂಜಿನಿಯರ್ ಗೌರವಾಧ್ಯಕ್ಷ ಡಿ.ಎಸ್.ದೇವರಾಜು, ನಿವೃತ್ತ ಸೂಪರಿಂಟೆಡೆಂಟ್ ಕೆ.ಜಿ.ವಿಜಯ್‌ಕುಮಾರ್, ಶಿಕ್ಷಕ ಶಿವಣ್ಣ ಮಂಗಲ ಇದ್ದರು.