ಇಂಜಿನಿಯರ್ಸ್ ಕಾಯ್ದೆಗೆ ಸರ್ಕಾರದ ಒಲವು

24Jaggu7-web
ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಸೋಸಿಯೇಶನ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಶ್ರೀಕಾಂತ ಚನ್ನಾಳ ಮಾತನಾಡಿದರು. ನಾಗರಾಜ ಅಂಕಸದೊಡ್ಡಿ, ಶ್ರೀಕಾಂತ ಚನ್ನಾಳ, ಎಸ್.ವೈ. ಕುಂದರಗಿ, ಸಿ.ಬಿ.ಹಿರೇಮಠ, ವಿ.ಬಿ. ಜಾವೂರ, ಪಂಚಾಕ್ಷರಿ ಹಿರೇಮಠ, ರಮೇಶ ಜಂಗಲ್ ಇದ್ದರು.
Published on

ಬೆಳಗಾವಿ: ‘ಸಿವಿಲ್ ಇಂಜಿನಿಯರ್ಸ್ ಕಾಯ್ದೆ’ ಈಗಾಗಲೇ ಗುಜರಾತ್‌ನಲ್ಲಿ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಯ್ದೆ ಜಾರಿ ಮಾಡುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಕಾನೂನು ಇಲಾಖೆ ಉಪಕಾರ್ಯದರ್ಶಿ, ಹೆಚ್ಚುವರಿ ಸಾಲಿಸಿಟರ್ ನಾಗರಾಜ ಅಂಕಸದೊಡ್ಡಿ ಹೇಳಿದರು.

ಬೆಳಗಾವಿಯ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಸೋಸಿಯೇಶನ್‌ನಲ್ಲಿಕಾಯ್ದೆ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕಾನೂನು ತರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕಾಯ್ದೆ ರೂಪಿಸುವ ಬಗ್ಗೆ ರಾಜ್ಯದಲ್ಲಿ ಕಾನೂನು ಸಚಿವರು ಇಚ್ಛಿಸಿದಾರೆ. ಇಂಜಿನಿಯರ್‌ಗಳು ನೀಡಿದ ಸಲಹೆ-ಸೂಚನೆ ಸರ್ಕಾರಕ್ಕೆ ವರದಿ ಮೂಲಕ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವೃತ್ತಿನಿರತ ಸಿವಿಲ್ ಇಂಜಿನಿಯರ್‌ಗಳ ಹಿತರಕ್ಷಣೆಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಿವಿಲ್ ಇಂಜಿನಿಯರ್ಸ್ ಕಾಯ್ದೆ ಕಾರ್ಯರೂಪಕ್ಕೆ ತರಬೇಕು. ಅನೇಕ ದಿನಗಳಲಿಂದ ನನೆಗುದಿಗೆ ಬಿದ್ದಿರುವ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು. ಕಾಯ್ದೆಯಿಂದ ಕಟ್ಟಡ, ರಸ್ತೆ, ನೀರು ಪೂರೈಕೆ ಕಾರ್ಯಗಳಲ್ಲಿ ಆಗಬಹುದಾದ ಲೋಪದೋಷಗಳಿಗೆ ಜವಾಬ್ದಾರಿ ಹೊರಿಸುವುದು ಹಾಗೂ ಇಂಜಿನಿಯರ್‌ಗಳು, ಅಧಿಕಾರಿಗಳು ಉತ್ತಮ ಕೆಲಸ ಮಾಡುವುದಕ್ಕೆ ಅನುಕೂಲವಾಗುವಂತೆ ಕಾಯ್ದೆ ರೂಪಿಸಬೇಕು ಎಂದು ಇಂಜಿನಿಯರ್‌ಗಳು ಸಂವಾದದಲ್ಲಿ ಒತ್ತಾಯಿಸಿದರು.

ಕಳೆದ ಅಧಿವೇಶನದಲ್ಲಿ ಸಚಿವ ಎಚ್.ಕೆ. ಪಾಟೀಲ ಅವರು ಈ ಬಗ್ಗೆ ರಾಜ್ಯದ ಆಯ್ದ ಇಂಜಿನಿಯರ್‌ಗಳ ಪೂರ್ವಭಾವಿ ಸಭೆ ನಡೆಸಿದ್ದರು. ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಂಬಲ ಸೂಚಿಸಿದ್ದರು. ಅದರಿಂದ ತ್ವರಿತವಾಗಿ ಕಾಯ್ದೆ ಜಾರಿಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲಾಖೆ ಹಾಗೂ ಖಾಸಗಿ ರಂಗದ ಉತ್ತರ ಕರ್ನಾಟಕ ಭಾಗದ 400ಕ್ಕೂ ಅಧಿಕ ಸಿವಿಲ್ ಇಂಜಿನಿಯರ್‌ಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ವೃತ್ತಿಪರ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ಶ್ರೀಕಾಂತ ಚನ್ನಾಳ, ಸಂಘದ ಪದಾಧಿಕಾರಿಗಳಾದ ಅಜಯ, ರಾಜಗೋಪಾಲ, ಗಿರೀಶ, ಅಶ್ವತ್ಥ, ಬೆಳಗಾವಿ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ಎಸ್.ವೈ.ಕುಂದರಗಿ, ಹಿರಿಯ ಇಂಜಿನಿಯರ್‌ಗಳಾದ ಸಿ.ಬಿ.ಹಿರೇಮಠ, ವಿ.ಬಿ.ಜಾವೂರ, ಬೆಳಗಾವಿ ವೃತ್ತಿಪರ ಇಂಜಿನಿಯರ್ ಸಂಘದ ಅಧ್ಯಕ್ಷ ಪಂಚಾಕ್ಷರಿ ಹಿರೇಮಠ, ಎಚ್.ಸುರೇಶ, ಎಂ.ನಾಗರಾಜ ಇದ್ದರು. ಸಮ್ಮೇಳನದ ಸಂಯೋಜನಾಧಿಕಾರಿ ರಮೇಶ ಜಂಗಲ್ ಸ್ವಾಗತಿಸಿ, ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net